ಬೆಂಗಳೂರು : ಪಾಪಿ ಮಗನೊಬ್ಬ ಕುಡಿಯೋಕೆ ಹಣ ಕೊಟ್ಟಿಲ್ಲ ಎಂದು ತಾಯಿಗೆ ಚಾಕು ಇರಿದು ಆಕೆಯ ಕೊರಳಿನಲ್ಲಿದ್ದ ಚಿನ್ನದ ತಾಳಿಯನ್ನು ಕಿತ್ಕೊಂಡು ಹೋದ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ತಾಯಿಯ ಮಾಂಗಲ್ಯ ದೋಚಿದ ಮಗ ಮಹೇಶ್ನ್ನು ಪೊಲೀಸರು ಬಂಧಿಸಿದ್ದಾರೆ.
ಕುಡಿತದ ಚಟಕ್ಕೆ ಬಿದ್ದಿದ್ದ ಮಹೇಶ್, ಅಮ್ಮನಿಂದ ಆಗಾಗ ಹಣ ಪಡೆಯುತ್ತಿದ್ದ. ತಾಯಿ ಜಯಲಕ್ಷ್ಮಿ ಕೂಲಿ ಕೆಲಸ ಮಾಡಿ ಮಗ ಮಹೇಶ್ನ ಖರ್ಚಿಗೆ ಅಂತಾ ಒಂದಷ್ಟು ಹಣವನ್ನು ನೀಡುತ್ತಿದ್ದಳು. ಅಮ್ಮ ನೀಡುತ್ತಿದ್ದ ಹಣದಲ್ಲಿ ಮಹೇಶ್ ಕುಡಿಯಲು ಶುರು ಮಾಡಿದ್ದ. ಮಗ ಕುಡಿತದ ಚಟಕ್ಕೆ ಬಿದ್ದಿದ್ದಾನೆ ಅಂತಾ ತಿಳಿದ ತಾಯಿ ಜಯಲಕ್ಷ್ಮಿ, ಕಳೆದ ಎರಡ್ಮೂರು ದಿನಗಳಿಂದ ಖರ್ಚಿಗೆ ಹಣ ಕೊಟ್ಟಿರಲಿಲ್ಲ.
ಅಮಲಿನ ದಾಸನಾಗಿದ್ದ ಮಹೇಶ್, ಮತ್ತೆ ಅಮ್ಮನ ಬಳಿ ಹಣಕ್ಕಾಗಿ ಪೀಡಿಸಿದ್ದಾನೆ. ಆದರೆ ಜಯಲಕ್ಷ್ಮಿ ಬಳಿ ಹಣ ಇರಲಿಲ್ಲ. ಇದೇ ವಿಚಾರಕ್ಕೆ ಗಲಾಟೆ ತೆಗೆದ ಮಹೇಶ್, ಹಣ ಇಲ್ಲ ಅಂದ್ರೆ ಕೊರಳಲ್ಲಿ ಇರುವ ತಾಳಿ ಸರ ಕೊಡು ಎಂದಿದ್ದಾನೆ.
ಇದೇ ಗಲಾಟೆಯಲ್ಲಿ ತಾಯಿಗೆ ಚಾಕು ಇರಿದು ತಾಳಿ ಸರ ಕಿತ್ಕೊಂಡು ಪರಾರಿ ಆಗಿದ್ದಾನೆ. ಗಾಯಗೊಂಡ ಜಯಲಕ್ಷ್ಮಿಯ ಕಿರುಚಾಟ ಕೇಳಿಸಿಕೊಂಡ ಸ್ಥಳೀಯರು ಆಕೆಯ ನಿವಾಸಕ್ಕೆ ದೌಡಾಯಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಲೆ ಯತ್ನ ಪ್ರಕರಣದ ಅಡಿಯಲ್ಲಿ ಜ್ಞಾನಭಾರತಿ ಠಾಣೆ ಪೊಲೀಸರು ಆರೋಪಿ ಮಹೇಶ್ನನ್ನು ಬಂಧಿಸಿದ್ದಾರೆ.









