ಮುಡಾ ಹಗರಣದಲ್ಲಿ ತಪ್ಪು ಮಾಡಿಲ್ಲ, ಯಾವ ತನಿಖೆಗೂ ಹೆದರಲ್ಲ – ಸಚಿವ ಭೈರತಿ ಸುರೇಶ್!

ಮೈಸೂರು : ಸಚಿವ ಭೈರತಿ ಸುರೇಶ್ ಅವರು ಕುಟುಂಬ ಸಮೇತ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಶಕ್ತಿದೇವತೆಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಬಳಿಕ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಸಿಎಂ  ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟೀಕಿಸಿರುವ ಬಿಜೆಪಿ ನಾಯಕರಿಗೆ  ನಗರಾಭಿವೃದ್ದಿ ಇಲಾಖೆ ಸಚಿವ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಸಚಿವ ಬೈರತಿ ಸುರೇಶ್ ಮಾತನಾಡಿ, ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ, ಮಾನ ಮರ್ಯಾದೆ ಇಲ್ಲದವರು ಮಾತ್ರ ಲೋಕಾಯುಕ್ತ ರಿಪೋರ್ಟ್ ಟೀಕಿಸಬೇಕು. ನಾವು ಏನು ತಪ್ಪು ಮಾಡಿಲ್ಲ ಬನ್ನಿ ಚಾಮುಂಡೇಶ್ವರಿ ಬಳಿ ಆಣೆ ಮಾಡಿ ಅಂತಾ ಕರೆದಿದ್ದೆ. ಯಾರು ಆಣೆ ಮಾಡಲು ಬರಲಿಲ್ಲ ಈಗ ಲೋಕಾಯುಕ್ತ ರಿಪೋರ್ಟ್ ಬಂದಿದೆ. ರಾಜ್ಯದ ಜನರಿಗೆ ಈಗ ಸತ್ಯ ಗೊತ್ತಾಗಿದೆ, ಸಿದ್ದರಾಮಯ್ಯ ಯಾವತ್ತು ಅಕ್ರಮ ಮಾಡಿಲ್ಲ ತಪ್ಪು ಮಾಡಿಲ್ಲ. ಬಿಜೆಪಿಯವರು ಸುಳ್ಳು ಹೇಳಿಕೊಂಡು ಮೈಸೂರು, ಮಂಗಳೂರು ಯಾತ್ರೆ‌ ಮಾಡಿದರು. ಪಾರ್ವತಮ್ಮನವರಿಗೆ ಭೂಮಿ ಹೋಗಿತ್ತು ಪರಿಹಾರ ಬಂದಿದೆ ಅಷ್ಟೇ ಎಂದು ಕಿಡಿ ಕಾರಿದ್ದಾರೆ.

ಮುಡಾದಲ್ಲಿ ಅಕ್ರಮ ಮಾಡಿದ ಒಬ್ಬರನ್ನೂ ಬಿಡುವ ಪ್ರಶ್ನೆಯೇ ಇಲ್ಲ, 50 : 50 ಅಕ್ರಮದ ಬಗ್ಗೆ ಪಿ ಎನ್ ದೇಸಾಯಿ ಆಯೋಗ ತನಿಖೆ ನಡೆಸುತ್ತಿದೆ. ತನಿಖೆ ಮುಗಿದ ಮೇಲೆ ಕ್ರಮ ಕೈಗೊಳ್ಳಲಾಗುವುದು, 50 : 50 ಪರಿಹಾರ ನೀಡುವ ಕಾನೂನು ಮುಡಾದಲ್ಲಿ ಇದೆ. ಅದರ ಅನ್ವಯ ಪರಿಹಾರ ನೀಡಲಾಗಿದೆ, ಆ ಕಾನೂನು ಇಲ್ಲದೆ ಪರಿಹಾರ ಹೇಗೆ ಕೊಡುವುದು. ಇದು ಬಿಜೆಪಿ ಅವರ ಕಾಲದಲ್ಲೇ ಪರಿಹಾರ ಹೆಚ್ಚು ನೀಡಿರುವುದು, ಪಾರ್ವತಮ್ಮ ಅವರಿಗೂ ಬಿಜೆಪಿ ಬೊಮ್ಮಾಯಿ ಅವರೇ ಪರಿಹಾರ ನೀಡಿರುವುದು ಎಂದು ಸಚಿವ ಬೈರತಿ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಮಂತ್ರಿಗಳು ತಪ್ಪು ಮಾಡಿದಾಗ ಜೈಲಿಗೆ ಕಳುಹಿಸಿದ್ದು ಲೋಕಾಯುಕ್ತ, ಅವರು ಪೂರ್ವಾಗ್ರಹಪೀಡಿತರಾಗಿ ವರದಿ ತನಿಖೆ ನಡೆಸಿಲ್ಲ. ವಾಸ್ತವ ಸ್ಥಿತಿಯನ್ನು ತನಿಖೆ ಮಾಡಿ ವರದಿ ನೀಡಿದ್ದಾರೆ, ಮುಡಾ ಫೈಲ್​ಗಳನ್ನು ನಾನು ತೆಗೆದುಕೊಂಡು ಹೋಗಲು ಅದು ಕಡ್ಲೆಪುರಿಯಲ್ಲ. ಫೈಲ್ ಮಿಸ್ಸಿಂಗ್ ಅಂತಾ ಯಾವ ವರದಿಯಲ್ಲಿ ಇದೆ ? ಫೈಲ್ ಎತ್ತಿಕೊಂಡು ಹೋಗುವುದು ಅಷ್ಟೊಂದು ಸುಲಭಾನಾ? ಕ್ಯಾಮೆರಾ ಸೇರಿ ಎಲ್ಲರ ಮುಂದೆ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ? ಅದರಲ್ಲೂ 141 ಫೈಲ್ ಅಂತಾ ಹೇಳಿದ್ದಾರೆ. ಇವರಿಗೆ ಆ ನಂಬರ್ ನೀಡಿದವರು ಯಾರು ? ಬಹುಶಃ ಈ ಆರೋಪ ಮಾಡಿದವರೇ ಫೈಲ್ ತೆಗೆದುಕೊಂಡು ಹೋಗಿರಬೇಕು ಎಂದು ಬೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : http://ಸಿನಿಪ್ರಿಯರ ಮನಗೆದ್ದ ‘ವಿಷ್ಣುಪ್ರಿಯ’.. ಮೊದಲ ದಿನವೇ ಎಲ್ಲೆಡೆ ಹೌಸ್​ಫುಲ್ ಪ್ರದರ್ಶನ!

Btv Kannada
Author: Btv Kannada

Leave a Comment

Read More