ಮಂಡ್ಯ : ಆಲಕೆರೆ ಗ್ರಾಮದಲ್ಲಿ 24ವರ್ಷಗಳ ನಂತರ ನಡೆಯುತ್ತಿರುವ ‘ಶ್ರೀ ವೀರಭದ್ರೇಶ್ವರ ಅಗ್ನಿ ಕೊಂಡೋತ್ಸವ’ದ ನಿಮಿತ್ತ ದೇವಾಲಯದ ಆವರಣದಲ್ಲಿ ಪೂರ್ವಬಾವಿ ಸಭೆ ನಡೆಸಿದ ಶಾಸಕ ರವಿಕುಮಾರ್ ಗೌಡ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿದ್ದಾರೆ.
ಪೂರ್ವಬಾವಿ ಸಭೆ ನಡೆಸುವ ಸಂದರ್ಭದಲ್ಲಿ ಆಲಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ನಮನ ಎಂಬ ವಿದ್ಯಾರ್ಥಿನಿ ಶಾಲೆಯಲ್ಲಿ ಪಾಠ ಮಾಡೋಕೆ ಶಿಕ್ಷಕರ ಕೊರತೆ ಇದ್ದು, ನಿಯೋಜಿಸುವಂತೆ ಹಾಗೂ ಶಾಲೆಯ ಛಾವಣಿ ಶೀತಿಲಗೊಂಡಿದೆ ಸರಿಯಾದ ವ್ಯವಸ್ಥೆ ಆಗಬೇಕು, ಈ ಕುರಿತು ಸಚಿವ ಮದುಬಂಗಾರಪ್ಪನವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಶಾಸಕ ರವಿಕುಮಾರ್ ಗೌಡರ ಗಮನಕ್ಕೆ ತಂದಿದ್ದಾಳೆ.

ವಿದ್ಯಾರ್ಥಿನಿಯ ಮಾತು ಕೇಳಿ ಸ್ಪಂದಿಸಿದ ಶಾಸಕ ರವಿಕುಮಾರ್ ಗೌಡ ಅವರು, ಸ್ಥಳದಲ್ಲೇ 5 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಿ ಶೀಘ್ರವೇ ಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪೋನ್ ಕರೆ ಮಾಡಿ ಸೂಚಿಸಿದ್ದಾರೆ.
ಇನ್ನು ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಬಳಿಕ ಕೀಲಾರ-ಆಲಕೆರೆ ಸಂಪರ್ಕ ರಸ್ತೆ ಅಭಿವೃದ್ಧಿ, ಆಲಕೆರೆ ಗ್ರಾಮದ ಒಳಗಿನ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ, ದೇವಲಾಯಕ್ಕೆ ಬಣ್ಣ ಬಳಿಸುವುದಾಗಿ ರವಿಕುಮಾರ್ ಗೌಡ ಅವರು ಭರವಸೆ ನೀಡಿದ್ದಾರೆ.
‘ಶ್ರೀ ವೀರಭದ್ರೇಶ್ವರ ಅಗ್ನಿ ಕೊಂಡೋತ್ಸವ’ದ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದವರಿಂದ ಹೆಚ್ಚಿನ ಬಸ್ ವ್ಯವಸ್ಥೆ, ದೇವಾಲಯದ ಹತ್ತಿರ ಶಾಶ್ವತ ಶೌಚಾಲಯ ನಿರ್ಮಾಣ, ತಾತ್ಕಾಲಿಕ ಆಸ್ಪತ್ರೆ, ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವುದಾಗಿ ಶಾಸಕ ರವಿಕುಮಾರ್ ಗೌಡ ಅವರು ತಿಳಿಸಿದ್ದಾರೆ.









