ಸ್ಪರ್ಧಾ ವಿಭಾಗಕ್ಕೆ ಸಿನಿಮಾಗಳನ್ನು ನೋಡದೆ ಆಯ್ಕೆ – ವಿವಾದದ ಸುಳಿಗೆ ಸಿಲುಕಿದ ಬೆಂಗಳೂರು ಫಿಲಂ ಫೆಸ್ಟಿವಲ್!

ಬೆಂಗಳೂರು : ವಿಶ್ವವಿಖ್ಯಾತ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮಾರ್ಚ್ 1 ರಿಂದ 8 ರವರೆಗೆ ಒರಾಯಿನ್ ಮಾಲ್​ನಲ್ಲಿ ನಡೆಯಲಿದೆ. ಈಗಾಗಲೇ ಚಲನಚಿತ್ರ ಸ್ಪರ್ಧಾ ವಿಭಾಗದ ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾಗಳನ್ನು ಪ್ರಕಟಿಸಲಾಗಿದೆ.

ಈ ಬೆನ್ನಲ್ಲೇ 20ಕ್ಕೂ ಹೆಚ್ಚು ನಿರ್ಮಾಪಕರು ಸಿನಿಮಾ ಆಯ್ಕೆ ಸಮಿತಿಯ ವಿರುದ್ದ ತೀವ್ರ ಆಕ್ರೋಶ ಹೊರಹಾಕಿದ್ದು, ಸಿನಿಮಾಗಳನ್ನು ನೋಡದೆಯೇ ಆಯ್ಕೆ ಮಾಡಲಾಗಿದೆ ಎಂದು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಸದ್ಯ ಈ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ.

ಚಿತ್ರಗಳ ಆಯ್ಕೆ ಸಮಿತಿಗೆ ಚಿತ್ರರಂಗವನ್ನು ಪ್ರತಿನಿಧಿಸುವ ಅಂಗಸಂಸ್ಥೆಗಳಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು, ನಂತರ ಉಳಿದ ಕೆಲಸ ಮಾಡಬೇಕೆಂಬ ನಿಯಮವಿದೆ. ಆದರೆ, ಚಿತ್ರೋತ್ಸವದ ಆಯೋಜಕರು ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಆಯ್ಕೆ ಸಮಿತಿ ರಚಿಸಿದ್ದಾರೆ. ಸ್ಪರ್ಧೆಗೆ ಕಳುಹಿಸಿದ ಚಿತ್ರಗಳನ್ನು ಪೂರ್ತಿ ವೀಕ್ಷಿಸದೇ ಚಿತ್ರಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು 20ಕ್ಕೂ ಅಧಿಕ ನಿರ್ಮಾಪಕರು ಶನಿವಾರ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಬುಧವಾರ (ಫೆ.19) ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ನಿರ್ದೇಶಕ ಅಭಿಲಾಷ್ ಶೆಟ್ಟಿಯವರು ಈ ಕುರಿತು ಟ್ವೀಟ್​ ಮಾಡಿದ್ದು, ‘ಈ ಸಲದ ಬೆಂಗಳೂರು ಚಿತ್ರೋತ್ಸವಕ್ಕಾಗಿ ನಮ್ಮ ‘ನಾಳೆ ರಜ ಕೋಳಿ ಮಜ’ ಚಿತ್ರವನ್ನು ಕನ್ನಡ, ಭಾರತ ಮತ್ತು ಏಷ್ಯನ್ ಮೂರು ವಿಭಾಗಗಳಿಗೂ ಕಳುಹಿಸಿದ್ದೆ. ‘ಸಿನಿಸೆಂಡ್’ ಡಿಜಿಟಲ್ ಮಾಧ್ಯಮದಲ್ಲಿ ಪ್ರತ್ಯೇಕ ಸ್ತ್ರೀನರ್ ಮಾಡಿದ್ದೆ. ಇದುವರೆಗೆ ಒಂದೇ ವ್ಯೂ ಆಗಿತ್ತು. ಉಳಿದೆರಡು ವಿಭಾಗಗಳಿಗೆ ಶುಲ್ಕ ಕಟ್ಟಿಸಿಕೊಂಡು ಚಿತ್ರವನ್ನೇ ನೋಡಿರಲಿಲ್ಲ. ಚಿತ್ರೋತ್ಸವದ ಆಯೋಜಕರಿಂದ ಸ್ಪಷ್ಟಿಕರಣ ಕೇಳಿದರೂ ಉತ್ತರ ಬರಲಿಲ್ಲ. ಉಳಿದ ಚಿತ್ರತಂಡಗಳು ಕೂಡ ಈ ಬಗ್ಗೆ ಗಮನಹರಿಸಿದಾಗ, 20ಕ್ಕೂ ಹೆಚ್ಚು ಸಿನಿಮಾಗಳನ್ನು ನೋಡದೇ ಇರುವುದು ಬೆಳಕಿಗೆ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ‘ಇದು ಎಂಕ, ನಾಣಿ, ಸೀನನ ಚಿತ್ರೋತ್ಸವ. ಪ್ರತಿ ವರ್ಷ ಆಯ್ಕೆಯಲ್ಲಿ ಕೆಲವು ಹಿತಾಸಕ್ತಿಗಳು ಕೆಲಸ ಮಾಡುವುದು ಸಹಜ. ಚಿತ್ರವನ್ನು ನೋಡದೆಯೇ ಆಯ್ಕೆ ನಿರ್ಧರಿಸಿದ್ದು ತಪ್ಪು. ಹೊಸ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಕೆಲವು ಚಿತ್ರತಂಡದವರು ಹೈಕೋರ್ಟ್ ಮೆಟ್ಟಿಲು ಏರಿದ್ದೇವೆ. ವಾರ್ತಾ ಇಲಾಖೆ, ಮುಖ್ಯಮಂತ್ರಿ ಗಮನಕ್ಕೂ ಈ ವಿಷಯವನ್ನು ತರುತ್ತೇವೆ ಎಂದು ನಿರ್ಮಾಪಕ ನಾಗೇಶ್ ಕುಮಾರ್ ಯು.ಎಸ್ ಹೇಳಿದ್ದಾರೆ.

Btv Kannada
Author: Btv Kannada

Leave a Comment

Read More