ಕುಂಭಮೇಳಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ – 10 ಭಕ್ತರು ಸ್ಥಳದಲ್ಲೇ ದುರ್ಮರಣ!

ಪ್ರಯಾಗ್‌ರಾಜ್‌ : ಛತ್ತೀಸ್‌ಗಢದಿಂದ ಕುಂಭಮೇಳಕ್ಕೆ ತೆರಳುತ್ತಿದ್ದ ಕಾರು ಭೀಕರವಾಗಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 10 ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪ್ರಯಾಗ್‌ರಾಜ್‌ನ ಮಿರ್ಜಾಪುರ ಹೆದ್ದಾರಿಯಲ್ಲಿ ನಡೆದಿದೆ.

ಮಿರ್ಜಾಪುರ ಹೆದ್ದಾರಿಯ ಮೇಜಾ ಪ್ರದೇಶದಲ್ಲಿ ಬೊಲೆರೊ ಕಾರು ಬಸ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 19 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಸ್ನಾನ ಮಾಡಲು ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಿಂದ ಭಕ್ತರು ಪ್ರಯಾಣಿಸುತ್ತಿದ್ದರು. ಭಕ್ತರನ್ನು ಕರೆದೊಯ್ಯುತ್ತಿದ್ದ ಬೊಲೆರೊ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಿಂದ ಪ್ರಯಾಣಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ.

ಇನ್ನು ಈ ದುರ್ಘಟನೆ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ಪಡೆದುಕೊಂಡಿದ್ದು, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಮತ್ತು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ, ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಮಹಾಕುಂಭದಿಂದ ಹಿಂತಿರುಗುತ್ತಿದ್ದ ಆಂಧ್ರಪ್ರದೇಶದ ಯಾತ್ರಿಕರು ಪ್ರಯಾಣಿಸುತ್ತಿದ್ದ ಮಿನಿ ಬಸ್‌, ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 7 ಮಂದಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು. ಇನ್ನು ಜ.29 ರಂದು ಮಹಾಕುಂಭಮೇಳ ಸ್ಥಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದು ಅತ್ಯಂತ ದುರಂತವಾಗಿತ್ತು.

Btv Kannada
Author: Btv Kannada

Leave a Comment

Read More