2008ರ 26/11 ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಶಿಕ್ಷೆಗೊಳಗಾಗಿರುವ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಮುಂದಾಗಿದ್ದು, ಪ್ರಧಾನಿ ಮೋದಿ ಸಮ್ಮುಖದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಘೋಷಣೆ ಮಾಡಿದ್ದಾರೆ.
ಮುಂಬೈ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನ ಹೈ-ಸೆಕ್ಯುರಿಟಿ ಜೈಲಿನಲ್ಲಿದ್ದಾನೆ. ಭಾರತವು ವರ್ಷಗಳಿಂದ ಅವನನ್ನು ಹಸ್ತಾಂತರಿಸುವಂತೆ ಕೇಳುತ್ತಿದೆ. ಇದೀಗ ಟ್ರಂಪ್ ತಹವ್ವುರ್ ರಾಣಾ ಹಸ್ತಾಂತರಕ್ಕೆ ಒಪ್ಪಿಕೊಂಡಿದ್ದಾರೆ.
’26/11 ಮುಂಬೈ ಭಯೋತ್ಪಾದನಾ ದಾಳಿಯ ಆರೋಪಿಯಾಗಿರುವ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ನಾವು ಭಾರತಕ್ಕೆ ಹಸ್ತಾಂತರಿಸುತ್ತಿದ್ದೇವೆ’ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಜನವರಿ 21, 2025 ರಂದು, ಯುಎಸ್ ಸುಪ್ರೀಂ ಕೋರ್ಟ್ ತಹವ್ವುರ್ ರಾಣಾ ಅವರ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿತು. ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅನುವು ಮಾಡಿಕೊಟ್ಟಿತು. “ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಮತ್ತು ಅಮೆರಿಕಾ ನೆಲದ ಕಾನೂನಿಗೆ ಅನುಗುಣವಾಗಿ, ರಾಜ್ಯ ಇಲಾಖೆಯು ಈ ಪ್ರಕರಣದಲ್ಲಿ ಮುಂದಿನ ಕ್ರಮಗಳನ್ನು ಮೌಲ್ಯಮಾಪನ ಮಾಡುತ್ತಿದೆ’ ಎಂದು ಹೇಳಿದೆ. ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಹಸ್ತಾಂತರಿಸುವಂತೆ ಕೋರಿ ಭಾರತ ನಡೆಸುತ್ತಿದ್ದ ದೀರ್ಘ ಕಾಲದ ಪ್ರಯತ್ನವನ್ನು ನಾವು ಬೆಂಬಲಿಸಿದ್ದೇವೆ ಎಂದು ಅಮೆರಿಕ ಹೇಳಿದೆ.
ಮುಂಬೈ ಭಯೋತ್ಪಾದಕ ದಾಳಿಯ ಆರೋಪಿಗಳನ್ನು ಹಸ್ತಾಂತರಿಸಲು ಒಪ್ಪಿಕೊಂಡಿರುವ ಅಮೆರಿಕಾ ನಿಲುವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದು, ಪ್ರಕ್ರಿಯೆಯನ್ನು ತ್ವರಿತಗೊಳಿಸಿದ್ದಕ್ಕಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದ ಹೇಳಿದ್ದಾರೆ.
