ಚಿಕ್ಕಬಳ್ಳಾಪುರ : ಸಂಸದ ಡಾ.ಕೆ ಸುಧಾಕರ್ ಹಾಗೂ ಸಚಿವ ಎಂ.ಸಿ ಸುಧಾಕರ್ ಸೇರಿದಂತೆ ಶಾಸಕ ಪ್ರದೀಪ್ ಈಶ್ವರ್, ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ ಮಧ್ಯೆ ಪ್ರತಿಷ್ಠೆಯಾಗಿ ತೀವ್ರ ಕೂತೂಹಲ ಮೂಡಿಸಿದ್ದ ಪಿಎಲ್ಡಿ ಬ್ಯಾಂಕ್ ಎಲೆಕ್ಷನ್ನಲ್ಲಿ ಸಂಸದ ಸುಧಾಕರ್ ಬೆಂಬಲಿಗರು ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಪಿಎಲ್ಡಿ ಬ್ಯಾಂಕ್ ಎಲೆಕ್ಷನ್ನಲ್ಲಿನ 13 ನಿದೇರ್ಶಕರ ಸ್ಥಾನಗಳ ಪೈಕಿ 5 ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. ಅದರಲ್ಲಿ ಸಂಸದ ಸುಧಾಕರ್ ಬೆಂಬಲಿತರೇ ಆಯ್ಕೆಯಾಗಿದ್ರು. ಒಬ್ರು ಕಾಂಗ್ರೆಸ್ನ್ನು ಬೆಂಬಲಿಸಿದ್ರು.

ಇನ್ನೂ ಉಳಿದ 7 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ನ್ಯಾಯಾಲಯದ ತಡೆಯಾಜ್ಞೆ ಮೇರೆಗೆ ನಂದಿ ಕ್ಷೇತ್ರದ ಫಲಿತಾಂಶ ತಡೆಹಿಡಿಯಲಾಗಿದೆ. ಉಳಿದ 6 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಆರು ಕ್ಷೇತ್ರಗಳಲ್ಲೂ ಸಂಸದ ಸುಧಾಕರ್ ಬೆಂಬಲಿತರೇ ಗೆದ್ದು ಬೀಗಿದ್ದಾರೆ. ಹೀಗಾಗಿ ನಿನ್ನೆ ಫಲಿತಾಂಶದ ನಂತರ ಸಂಸದ ಸುಧಾಕಾರ್ ಪಿಎಲ್ಡಿ ಬ್ಯಾಂಕ್ ವರೆಗೂ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸಿದ್ದಾರೆ.

ಶತಾಯಗತಾಯ ಪಿಎಲ್ಡಿ ಬ್ಯಾಂಕ್ ಗದ್ದುಗೆ ತಮಗೆ ಸಿಗಬೇಕೆಂಬ ಛಲತೊಟ್ಟಿದ್ದ ಡಾ.ಕೆ.ಸುಧಾಕರ್ ಚುನಾವಣೆಗೂ ಮುಂಚೆ ಹಲವು ಸಭೆಗಳನ್ನು ನಡೆಸಿದ್ದರು. ಚುನಾವಣಾ ಪ್ರಕ್ರಿಯೆವರೆಗೂ ನಿಗಾವಹಿಸಿದ್ದ ಸುಧಾಕರ್ ಸ್ವತಃ ಬಂದು ಮತ ಚಲಾವಣೆಯನ್ನು ಮಾಡಿ ಫಲಿತಾಂಶಕ್ಕೂ ಮುನ್ನವೇ ವಿಜಯದ ನಗೆ ಬೀರಿದ್ದರು. ಅವರು ಬಯಸಿದಂತೆ ಚುನಾವಣೆ ಫಲಿತಾಂಶವೂ ಬಂದಿದ್ದು, ಮತ್ತೆ ಬಿಜೆಪಿ ಬೆಂಬಲಿತರಿಗೆ ಪಿಎಲ್ಡಿ ಬ್ಯಾಂಕ್ ಆಡಳಿತ ದಕ್ಕಿದೆ.

ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ನವರು ಅಧಿಕಾರದ ದರ್ಪ, ಹಣದ ಬಲ, ಬೆದರಿಕೆ ಎಲ್ಲವನ್ನೂ ಬಳಸಿದರೂ ನಮ್ಮ ಶಕ್ತಿ ಕುಂದಿಸಲು ಆಗಿಲ್ಲ. ಉತ್ತಮ ಕಾರ್ಯನಿರ್ವಹಣೆ ಮೂಲಕ ಬ್ಯಾಂಕ್ನ್ನು ಮುನ್ನಡೆಸುತ್ತಿದ್ದು, ರೈತರು ನಮ್ಮನ್ನು ನಂಬಿ ಮತ ನೀಡಿದ್ದಾರೆ. ನಮ್ಮ ಬೆಂಬಲಿತ ಅಭ್ಯರ್ಥಿಗಳೇ ಜಯಗಳಿಸಿದ್ದು, ತುಂಬಾ ಸಂತೋಷ ತಂದಿದೆ. ಇದೇ ರೀತಿ ನಮ್ಮ ಕಾರ್ಯಗಳು ಮುಂದುವರಿಯಲಿವೆ ಎಂದು ಭರವಸೆ ನೀಡಿದ್ದಾರೆ.









