ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 2025ರ ಕುಂಭಮೇಳ ನಡೆಯುತ್ತಿದ್ದು, ವಿವಿಧ ಕ್ಷೇತ್ರಗಳ ಗಣ್ಯರೂ ಸೇರಿದಂತೆ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಸೆಲೆಬ್ರಿಟಿಗಳೂ ಸೇರಿದಂತೆ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಇದೀಗ ಕನ್ನಡದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ.

ಮಡೆನೂರ್ ಮನು ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಕುಂಭಮೇಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನು ಕೈಯಲ್ಲಿ ಕುಲದಲ್ಲಿ ಕೀಳ್ಯಾವುದೋ ಚಿತ್ರದ ಪೋಸ್ಟರ್ ಹಿಡಿದು ಸಂಗಮದಲ್ಲಿ ಮಿಂದೆದ್ದಿದ್ದಾರೆ. ಹಾಗೆಯೇ ನಾಗಸಾಧುಗಳೊಂದಿಗೆ ಪೋಸ್ಟರ್ ಹಿಡಿದು ಫೋಟೋ ತೆಗೆಸಿಕೊಂಡಿದ್ದಾರೆ.

ಕುಲದಲ್ಲಿ ಕೀಳ್ಯಾವುದೋ ಚಿತ್ರವನ್ನು ಪರ್ಲ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಂತೋಷ್ ಹಾಗೂ ವಿದ್ಯಾ ದಂಪತಿ ನಿರ್ಮಾಣ ಮಾಡುತ್ತಿದ್ದಾರೆ. ಯೋಗರಾಜ್ ಸಿನಿಮಾಸ್ ಅರ್ಪಿಸುತ್ತಿರುವ ಈ ಸಿನಿಮಾವನ್ನು ರಾಮ್ ನಾರಾಯಣ್ ನಿರ್ದೇಶಿಸುತ್ತಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಮಡೆನೂರ್ ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ನಟಿಸಿದ್ದಾರೆ.
