ಹಾವೇರಿ : ಮೂರು ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿರುವ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಕುಂಭಕರ್ಣ ನಿದ್ರೆಯಲ್ಲಿದ್ದ ಆರ್ಟಿಓ ಕಚೇರಿಯನ್ನು ಬಡಿದೆಬ್ಬಿಸಿದ್ದು, ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಫಿಟ್ನೆಸ್ ಮುಗಿದ 75,053 ವಾಹನಗಳು ರಸ್ತೆಯಲ್ಲಿ ಇನ್ನೂ ಓಡಾಡುತ್ತಿದ್ದು, ಇದರಲ್ಲಿ 26 ಶಾಲಾ ಬಸ್‌ಗಳು ಮಕ್ಕಳ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿವೆ. ವಿವಿಧ ಶಿಕ್ಷಣ ಸಂಸ್ಥೆಗಳ ಬಸ್‌ಗಳು ಫಿಟ್ನೆಸ್ ಮುಗಿದು ವರ್ಷಗಳೇ ಕಳೆದರು ನಿತ್ಯ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದೆ.

RTO ಕಚೇರಿಗೆ ಉಪ ಲೋಕಾಯುಕ್ತ ದಿಢೀರ್ ಭೇಟಿ ವೇಳೆ ಈ ಎಲ್ಲಾ ವಿಚಾರ ಬೆಳಕಿಗೆ ಬಂದಿದ್ದು, ಫಿಟ್ನೆಸ್ ಮುಗಿದ ವಾಹನಗಳ ಸಂಖ್ಯೆ ಕೇಳಿ ಒಂದು ಕ್ಷಣ ಉಪ ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಫಿಟ್ನೆಸ್ ಮುಗಿದ ವಾಹನಗಳ ಪೈಕಿ 58,811 ಮೋಟಾರು ಸೈಕಲ್‌ಗಳಾದರೆ, 4,155 ಪರ್ಸನಲ್ ಕಾರ್‌ಗಳು, 3,428 ಟ್ರ್ಯಾಕ್ಟರ್‌ಗಳು, 1,667 ತ್ರಿ ವಿಲರ್ ವಾಹನಗಳು, 5585 ಗೂಡ್ಸ್ ವಾಹನಗಳು ಹಾಗೂ 1,397 ಟ್ರ್ಯಾಕ್ಸಿಗಳಿವೆ.

ಇಷ್ಟೊಂದು ವಾಹನಗಳ ಫಿಟ್ನೆಸ್ ಮುಗಿದರೂ ಸರಿಯಾದ ಕ್ರಮ ಕೈಗೊಳ್ಳದೆ ಗಾಢ ನಿದ್ರೆಯಲ್ಲಿದ್ದ RTO ಅಧಿಕಾರಿಗಳಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಚಳಿ ಬಿಡಿಸಿದ್ದು, ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟ ಮಾಡಿರುವ ನಿಮಗೆ ಯಾವ ಶಿಕ್ಷೆ ನೀಡಬೇಕು? ಸರ್ಕಾರ ನಿಮಗೆ ಲಕ್ಷಾಂತರ ರೂಪಾಯಿ ಸಂಬಳ ನೀಡುತ್ತೆ. ಟ್ಯಾಕ್ಸ್ ಕಲೆಕ್ಷನ್ ಮಾಡಿದರೆ ನಿಮ್ಮ ಕಚೇರಿಯ ಸಿಬ್ಬಂದಿಗಳು ವೇತನ ನೀಡಲು ಸಾಧ್ಯವಾಗುತ್ತಿತ್ತು. ಇಷ್ಟೊಂದು ವಾಹನಗಳ ಫಿಟ್ನೆಸ್ ಮುಗಿದರು ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾವು ಎರಡು ದಿನ ಇಲ್ಲೇ ಇರುತ್ತೇವೆ. ಅಷ್ಟರಲ್ಲಿ ಎಷ್ಟು ವಾಹನಗಳನ್ನ ಸೀಜ್ ಮಾಡುತ್ತೀರಾ ನೋಡುತ್ತೇವೆ. ಎಲ್ಲಕ್ಕಿಂದ ಮೊದಲು ಫಿಟ್ನೆಸ್ ಮುಗಿದಿರುವ 26 ಬಸ್‌ಗಳನ್ನು ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಗಡವು ನೀಡಿದ್ದಾರೆ. ಇನ್ನು ಇಂತಹ ವಾಹನಗಳನ್ನು ರಸ್ತೆಯ ಮೇಲೆ ಓಡಾಡೋಕೆ ಬಿಟ್ಟಿರೋದು ದೊಡ್ಡ ಅಪರಾಧ. ಈ ವಿಚಾರಕ್ಕೆ ಕೇಸ್ ರಿಜಿಸ್ಟರ್ ಮಾಡುತ್ತೇವೆ ಎಂದು ಹೇಳಿದ್ದಾರೆ.
