ಅವಹೇಳನಕಾರಿ ಪೋಸ್ಟ್​ಗೆ ಮೈಸೂರು ಉದ್ವಿಗ್ನ – ರಾತ್ರೋರಾತ್ರಿ ಉದಯಗಿರಿ ಠಾಣೆಗೆ ಸಾವಿರಾರು ಜನರಿಂದ ಮುತ್ತಿಗೆ.. ಕಲ್ಲು ತೂರಾಟ!

ಮೈಸೂರು : ಒಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವುದನ್ನು ವಿರೋಧಿಸಿ ಸಾವಿರಾರು ಜನ ಸೋಮವಾರ (ಫೆ.10) ರಾತ್ರೋರಾತ್ರಿ ಉದಯಗಿರಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ವ್ಯಕ್ತಿಯೊಬ್ಬ ಮಾಡಿದ ಅವಹೇಳನಕಾರಿ ಪೋಸ್ಟ್‌ನಿಂದಾಗಿ ಗಲಭೆ ಸೃಷ್ಟಿಯಾಗಿದ್ದು, ಕೆಲ ಕಿಡಿಗೇಡಿಗಳು ಪೊಲೀಸ್ ಠಾಣೆ ಮತ್ತು ಡಿಸಿಪಿ ವಾಹನಗಳಿಗೆ ಕಲ್ಲು ತೂರಿದ್ದಾರೆ. ಮೈಸೂರಿನ ಕಲ್ಯಾಣಿಗಿರಿ ನಿವಾಸಿ ಸುರೇಶ್ ಎಂಬಾತ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದಕ್ಕೆ ಈ ಗಲಭೆ ಸೃಷ್ಟಿಯಾಗಿದೆ.

ಪೋಸ್ಟ್‌ನಲ್ಲಿ ಏನಿದೆ? ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ದೆಹಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಫೋಟೋಗಳನ್ನು ವಿವಸ್ತ್ರಗೊಳಿಸಿ, ತಲೆಯ ಮೇಲೆ ಅನ್ಯಧರ್ಮದ ವೇಷ ಭೂಷಣವನ್ನು ತಪ್ಪಾಗಿ ಎಡಿಟ್ ಮಾಡಿದ್ದಲ್ಲದೆ, ಧರ್ಮಗುರುಗಳ ಬಗ್ಗೆಯೂ ಕೆಲ ಆಕ್ಷೇಪಾರ್ಹ ಪದಗಳನ್ನು ಬರೆದು ಹರಿಬಿಡಲಾಗಿತ್ತು.

ಪೊಲೀಸ್ ಠಾಣೆ, ವಾಹನದ ಮೇಲೆ ಕಲ್ಲು ತೂರಾಟ : ಪೋಸ್ಟ್ ನೋಡಿದ ಒಂದು ಸಮುದಾಯದ ಜನರು ಆಕ್ರೋಶಗೊಂಡು ತಡರಾತ್ರಿ ದಿಢೀರ್ ಪ್ರತಿಭಟನೆಗಿಳಿದಿದ್ದು, ಉದಯಗಿರಿ ಪೊಲೀಸ್‌ ಠಾಣೆ ಎದುರು ಜಮಾಯಿಸಿ, ಅವಹೇಳನ ಮಾಡಿದ ವ್ಯಕ್ತಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕೂಡಲೇ ಆತನನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು.

ಇದೇ ಸಂದರ್ಭದಲ್ಲಿ ಕಲ್ಲು ತೂರಾಟವನ್ನೂ ನಡೆಸಿದ್ದಾರೆ. ಯಾವಾಗ ಕಲ್ಲು ತೂರಾಟವಾಯ್ತ ಆಗ ಎಚ್ಚೆತ್ತ ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸದ್ಯ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಇನ್ನು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪಿಯನ್ನು ಸುಮೋಟೊ ಕೇಸ್​ ದಾಖಲಿಸಿ ಉದಯಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ.

Btv Kannada
Author: Btv Kannada

Leave a Comment

Read More