ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿ ತಮ್ಮದೇ ಆದ ಚಾಪು ಮೂಡಿಸಿರುವ ಜನಪ್ರಿಯ ನಟ ಚರಣ್ ರಾಜ್ ಅವರು ನಿರ್ದೇಶಿಸಲಿರುವ ನೂತನ ಚಿತ್ರವೊಂದು ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ. ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದ್ದು, ABCR ಫಿಲಂ ಫ್ಯಾಕ್ಟರಿ ಬ್ಯಾನರ್ನಲ್ಲಿ ಅಶ್ವಥ್ ಬಳಗೆರೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಬಹುಭಾಷಾ ನಟ ಕಿಶೋರ್ ಸಹ ಈ ಚಿತ್ರದಲ್ಲಿ ನಟಿಸಲಿದ್ದು, ಚರಣ್ ರಾಜ್ ಅವರ ದ್ವಿತೀಯ ಪುತ್ರ ದೇವ್ ಚರಣ್ ರಾಜ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಗರ್ ಗುರುರಾಜ್ ಸಂಗೀತ ನಿರ್ದೇಶನ ಹಾಗೂ ಪೃಥ್ವಿ ಛಾಯಾಗ್ರಹಣವಿರುವ ಈ ನೂತನ ಚಿತ್ರದ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

ಇದೊಂದು ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ನಾನೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದೇನೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಲೇಜ್ನಲ್ಲೇ ನಡೆಯಲಿದ್ದು, ಕಾಲೇಜ್ ರಜಾ ಶುರುವಾದ ತಕ್ಷಣ ನಮ್ಮ ಚಿತ್ರದ ಚಿತ್ರೀಕರಣ ಸಹ ಆರಂಭವಾಗಲಿದೆ. ಕನ್ನಡದ ಚಿತ್ರೀಕರಣ ಬೆಂಗಳೂರಿನಲ್ಲಿ, ತಮಿಳಿನ ಚಿತ್ರೀಕರಣ ಪಾಂಡಿಚೇರಿ ಹಾಗೂ ಕಡಲೂರಿನಲ್ಲಿ ಮತ್ತು ತೆಲುಗು ಭಾಷೆಯ ಚಿತ್ರೀಕರಣ ಹೊಂಗನೂರು ಮುಂತಾದ ಕಡೆ ನಡೆಯಲಿದೆ.

ಈ ಚಿತ್ರದ ಮೂಲಕ ನನ್ನ ದ್ವಿತೀಯ ಪುತ್ರ ದೇವ್ ಚರಣ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ನನಗೆ ತಾವೆಲ್ಲರೂ ಆರಂಭದಿಂದಲೂ ಅಧಿಕ ಪ್ರೀತಿ ಹಾಗೂ ಪ್ರೋತ್ಸಾಹ ನೀಡಿದ್ದೀರಿ. ಅದು ನನ್ನ ಮಗನಿಗೂ ಮುಂದುವರೆಯಲಿ ಎಂದು ಹಿರಿಯ ನಟ ಹಾಗೂ ನಿರ್ದೇಶಕ ಚರಣ್ ರಾಜ್ ಹೇಳಿದರು.
ಇದನ್ನೂ ಓದಿ : http://“1990s” ಚಿತ್ರದ ಟ್ರೇಲರ್ ಅನಾವರಣಗೊಳಿಸಿದ ಡಾ. ನಾ.ಸೋಮೇಶ್ವರ್, ಇಂದ್ರಜಿತ್ ಲಂಕೇಶ್ – ಫೆ.28ಕ್ಕೆ ಸಿನಿಮಾ ತೆರೆಗೆ!
