ಇತ್ತೀಚೆಗೆ ನಟ ಅಜಿತ್ ಕುಮಾರ್ ತಮ್ಮ ತಂಡದೊಂದಿಗೆ ದುಬೈ ಕಾರ್ ರೇಸಿಂಗ್ನಲ್ಲಿ ಭಾಗವಹಿಸಿದ್ದರು. ಸದ್ಯ ನಟ ಪೋರ್ಚುಗಲ್ನಲ್ಲಿ ನಡೆಯುತ್ತಿರುವ ರೇಸಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಕೆಲ ದಿನಗಳಿಂದ ಅಲ್ಲೇ ಮೋಟಾರ್ ಸ್ಪೋರ್ಟ್ಸ್ ರೇಸಿಂಗ್ ತರಬೇತಿಯಲ್ಲಿ ನಟ ಅಜಿತ್ ನಿರತರಾಗಿದ್ದಾರೆ. ತರಬೇತಿ ಪಡೆಯುತ್ತಿದ್ದ ವೇಳೆ ಅಜಿತ್ ಅವರ ಕಾರು ಮತ್ತೆ ಅಪಘಾತಕ್ಕೀಡಾಗಿದೆ.
ಕಳೆದ ಜನವರಿಯಲ್ಲಿ ದುಬೈನಲ್ಲಿ ನಡೆದ ಕಾರ್ ರೇಸ್ನಲ್ಲಿ ಅಜಿತ್ ಭಾಗವಹಿಸಿದ್ದರು. ರೇಸ್ ಆರಂಭವಾಗುವ ಮುನ್ನ ಅಭ್ಯಾಸದ ವೇಳೆ ಬ್ರೇಕ್ ಫೇಲ್ ಆಗಿ ಕಾರು ಅಪಘಾತ ಸಂಭವಿಸಿತ್ತು. ಅದೃಷ್ಟವಶಾತ್, ಅಜಿತ್‌ಗೆ ಏನೂ ಆಗಲಿಲ್ಲ. ಬಳಿಕ ನಟ ರೇಸ್ನಿಂದ ಹೊರಗುಳಿಯುತ್ತಾರೆ ಎನ್ನಲಾಗಿತ್ತು. ಆದ್ರೆ ಅಜಿತ್ ಛಲ ಬಿಡದೆ ರೇಸ್ನಲ್ಲಿ ಭಾಗವಹಿಸಿದ್ರು. ಅಜಿತ್ ತಂಡ ಮೂರನೇ ಸ್ಥಾನ ಪಡೆದು ಸಂಭ್ರಮಿಸಿತು. ಅಜಿತ್ ಕುಮಾರ್ ಅವರಿಗೆ ‘ಲಿಬರ್ಟಿ ಆಫ್ ದಿ ಗೇಮ್’ ಪ್ರಶಸ್ತಿಯೂ ದೊರೆಯಿತು.
ಆದ್ರೆ ಇದೀಗ ಅಜಿತ್ ಕುಮಾರ್ ಪೋರ್ಚುಗಲ್ನ ಎಸ್ಟೋರಿಲ್ ನಲ್ಲಿರುವ ಟ್ರ್ಯಾಕ್ನಲ್ಲಿ ತರಬೇತಿ ನಡೆಸುತ್ತಿದ್ದಾರೆ. ತರಬೇತಿ ವೇಳೆ ಅಜಿತ್ ಕಾರಿಗೆ ಸಣ್ಣ ಅಪಘಾತವಾಗಿದೆ. ಘಟನೆಯಲ್ಲಿ ಅಜಿತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
