ತಿರುಪತಿ ಲಡ್ಡು ವಿವಾದಕ್ಕೆ ಸ್ಫೋಟಕ ಟ್ವಿಸ್ಟ್ -CBI ಅಧಿಕಾರಿಗಳಿಂದ ನಾಲ್ವರು ಆರೋಪಿಗಳು ಅರೆಸ್ಟ್!

ತಿರುಪತಿ : ತಿರುಪತಿಯ ಪ್ರಸಿದ್ಧ ಲಡ್ಡು ಪ್ರಸಾದದ ತಯಾರಿಕೆಯಲ್ಲಿ ಕಲಬೆರಕೆ ತುಪ್ಪದ ಬಳಕೆ ಆರೋಪ ಪ್ರಕರಣ ಸಂಬಂಧ ಸಿಬಿಐ ತನಿಖೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚನೆಯಾದ ಸಿಬಿಐ ವಿಶೇಷ ತನಿಖಾ ತಂಡವು ಲಡ್ಡು ತಯಾರಿಸಲು ತುಪ್ಪ ಪೂರೈಸಿದ ಕಂಪನಿಗಳ ನಾಲ್ವರನ್ನು ಬಂಧಿಸಿದೆ.

ಟೆಂಡರ್ ಪಡೆಯುವ ಹಂತದಿಂದ ಪೂರೈಕೆ ಹಂತದವರೆಗೂ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್ (ರೂರ್ಕಿ, ಉತ್ತರಾಖಂಡ), ವೈಷ್ಣವಿ ಡೈರಿಯ (ಪೂನಂಬಾಕ್ಕಂ) ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ (ದುಂಡಿಗಲ್) ಎಂಡಿ ರಾಜು ರಾಜಶೇಖರನ್ ಇವರುಗಳು ಲಡ್ಡು ಪ್ರಸಾದ ಕಲಬೆರಕೆ ಹಗರಣದಲ್ಲಿ ಬಂಧಿತರಾಗಿರುವ ಆರೋಪಿಗಳಾಗಿದ್ದಾರೆ.

ಮೂಲಗಳ ಪ್ರಕಾರ ಆರೋಪಿಗಳನ್ನು ಅಪರಾಧ ಸಂಖ್ಯೆ 470/24 ರ ಅಡಿಯಲ್ಲಿ ಬಂಧಿಸಿ ತಿರುಪತಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖೆಯಲ್ಲಿ ತುಪ್ಪ ಪೂರೈಕೆಯಲ್ಲಿ ಪಾಲಿಸಬೇಕಾದ ನಿಯಮಗಳ ಉಲ್ಲಂಘನೆಯಾಗಿರುವುದು ಬಹಿರಂಗವಾಗಿದೆ. ಇದರಲ್ಲಿ ಟೆಂಡರ್‌ ಪಡೆಯಲು ನಕಲಿ ದಾಖಲೆಗಳು ಮತ್ತು ಸ್ಟ್ಯಾಂಪ್‌ಗಳನ್ನು ಬಳಸಿರುವುದು ಕೂಡ ಸೇರಿಕೊಂಡಿದೆ. ವೈಷ್ಣವಿ ಡೈರಿಯು ಭೋಲೆ ಬಾಬಾ ಡೈರಿಯ ತುಪ್ಪ ಪೂರೈಕೆಯ ನಿಯಮಗಳನ್ನು ತಿರುಚಿರುವುದು ಬೆಳಕಿಗೆ ಬಂದಿದ್ದು, ವಿಚಾರಣೆಯಲ್ಲಿ ಪೂರೈಕೆಯಲ್ಲಿ ಹಲವು ವ್ಯತ್ಯಾಸಗಳು ಮತ್ತು ಸುಳ್ಳು ದಾಖಲೆಗಳನ್ನು ನೀಡಿರುವುದು ಕಂಡುಬಂದಿವೆ.

ಏನಿದು ಪ್ರಕರಣ? ಇತ್ತೀಚೆಗೆ ತಿರುಪತಿ ತಿರುಮಲದಲ್ಲಿ ನೀಡುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಮಿಶ್ರಣ ಮಾಡಲಾಗಿದೆ ಎಂಬ ಅಘಾತಕಾರಿ ಅಂಶ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ಲದೆ ಶ್ರೀವಾರಿ ಭಕ್ತರ ನಂಬಿಕೆಗೆ ಘಾಸಿಗೊಳಿಸಲಾಗಿದೆ, ಹಿಂದೂ ಧರ್ಮೀಯರ ನಂಬಿಕೆಗೆ ಅಪಮಾನ ಮಾಡಲಾಗಿದೆ ಎಂದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತಿರುಮಲದಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಲಡ್ಡುವಿನಲ್ಲಿ ಹಸುವಿನ ಕೊಬ್ಬು ಮತ್ತು ಪ್ರಾಣಿಗಳ ತ್ಯಾಜ್ಯ ಮಿಶ್ರಣ ಮಾಡಲಾಗಿದೆ ಎಂದು ಚಂದ್ರಬಾಬು ನಾಯ್ಡು ಸರ್ಕಾರ ಆರೋಪಿಸಿತ್ತು. ಅವರು ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ತಿರುಮಲ ಲಡ್ಡುವಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.

Btv Kannada
Author: Btv Kannada

Leave a Comment

Read More