ಮಡೆನೂರ್ ಮನು ನಟನೆಯ’ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಫಸ್ಟ್​ ಸಾಂಗ್​ ರಿಲೀಸ್​!

ಈಗಿನ ಜನತೆಗೆ ಬೇಕಾದಂತಹ ಹಾಡುಗಳನ್ನು ಬರೆಯುವ ಗೀತರಚನೆಕಾರರಲ್ಲಿ ಯೋಗರಾಜ್ ಭಟ್ ಮೊದಲಿಗರು ಎನ್ನಬಹುದು. ದಿನ ನಾವು ಆಡುವ ಮಾತುಗಳನ್ನೇ ಯೋಗರಾಜ್ ಭಟ್ ಅವರು ಹಾಡುಗಳ ರೂಪಕ್ಕೆ ತಂದು ಎಲ್ಲರೂ ಗುನುಗುವ ಹಾಗೆ ಮಾಡುತ್ತಾರೆ.

ಪ್ರಸ್ತುತ ಯೋಗರಾಜ್ ಭಟ್ ಅವರು “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರಕ್ಕೆ “ನಮ್ ಪೈಕಿ ಒಬ್ಬ ಹೋಗ್ಬುಟ” ಎಂಬ ಹಾಡನ್ನು ಬರೆದಿದ್ದಾರೆ. ಈ ಹಾಡಿಗೆ ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕ ಆಂಥೋನಿ ದಾಸ್ ಅವರ ಕಂಠಸಿರಿಯಲ್ಲಿ‌ ಈ ಹಾಡು ಮೂಡಿಬಂದಿದೆ.

ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ನಡೆದಿದ್ದು, ಸಿನಿಮಾ ನಾಯಕ ನಟ ಮನು ಬ್ಯಾಂಡ್ ಬಾರಿಸಿಕೊಂಡು ಬ್ಯಾಂಡ್ ಸೆಟ್ ಅವರ ಹಾಗೂ ಅರ್ಕೆಸ್ಟ್ರಾ ಕಲಾವಿದರ ಜೊತೆಗೆ ವೇದಿಕೆಗೆ ಬಂದು ಈ‌ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗರಾಜ್ ಭಟ್, ನನಗೆ “ಕಾಮಿಡಿ ಕಿಲಾಡಿಗಳು” ಸಮಯದಲ್ಲಿ ಮನು ನಟನೆ ನೋಡಿ ನೀನು ಇಲ್ಲಿ ಮಾತ್ರ ಅಲ್ಲ. ಸಿನಿಮಾಗೂ ಸಲ್ಲುವವನು ಅಂತ ಹೇಳಿದ್ದೆ. ಈ ಚಿತ್ರದ ಕಥೆ ನಾನು ಹಾಗೂ ಇಸ್ಲಾಮುದ್ದೀನ್ ಸೇರಿ ಬರೆದಿದ್ದೇವೆ‌. ಈ ಕಥೆಗೆ ಮನು ಸೂಕ್ತ ನಾಯಕ. ಯೋಗರಾಜ್ ಸಿನಿಮಾಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಹಾಗೂ ವಿದ್ಯಾ ದಂಪತಿ ನಿರ್ಮಾಣ ಮಾಡುತ್ತಿದ್ದಾರೆ. ರಾಮ್ ನಾರಾಯಣ್ ನಿರ್ದೇಶಿಸುತ್ತಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ. ಇನ್ನು ಇಂದು ಬಿಡುಗಡೆಯಾಗಿರುವ ಈ ಹಾಡನ್ನು ನಾನು ಬರೆಯಲು ಮನೋಮೂರ್ತಿ ಅವರ ಕಾರು ಚಾಲಕ ಸ್ಪೂರ್ತಿ‌. ಆತ ಇಂದು ನಮ್ಮೊಂದಿಗಿಲ್ಲ. ಆತನ ಸಾವು ಹಾಗೂ ಆನಂತರ ನಡೆದ ಸನ್ನಿವೇಶಗಳೇ ನಾನು ಹಾಡು ಬರೆಯಲು ಕಾರಣ ಎಂದು ಯೋಗರಾಜ್ ಭಟ್ ಹೇಳಿದ್ದಾರೆ.

ನನಗೆ ಒಂದು ದೊಡ್ದ ಬ್ಯಾನರ್ ನಲ್ಲಿ ನಟಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ ಎಂದು ಮಾತು ಆರಂಭಿಸಿದ ನಾಯಕ ಮಡೆನೂರ್ ಮನು, ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಯೋಗರಾಜ್ ಭಟ್ ಅವರಿಗೆ ಧನ್ಯವಾದ. ನಾನು ಮೂಲತಃ ಆರ್ಕೇಸ್ಟ್ರಾ ಕಲಾವಿದ. ಈ ಚಿತ್ರದಲ್ಲೂ ನನ್ನದು ಅದೇ ಪಾತ್ರ. ಸಾವಿನ ಬಗ್ಗೆ ಎಲ್ಲರಿಗೂ ಅರ್ಥವಾಗುವ ಹಾಗೆ ಅರ್ಥಗರ್ಭಿತ ಹಾಡೊಂದನ್ನು ಯೋಗರಾಜ್ ಭಟ್ ಅವರು ಬರೆದಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ ಹಾಗೂ ಅವರದೆ ಆಡಿಯೋ ಕಂಪನಿ ಮೂಲಕ ಬಿಡುಗಡೆ ಮಾಡಿದ್ದಾರೆ ಎಂದಿದ್ದಾರೆ.

ಚಿತ್ರದ ತಾರಾಬಳಗದಲ್ಲಿ ಮಡೆನೂರ್ ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರಿದ್ದಾರೆ.

Btv Kannada
Author: Btv Kannada

Leave a Comment

Read More