ದಾಖಲೆಯ 16ನೇ ಬಜೆಟ್​ಗೆ ಸಿಎಂ ಸಿದ್ದು ತಯಾರಿ – ಮೂರೇ ದಿನದಲ್ಲಿ 35 ಇಲಾಖೆ ಜೊತೆ ಮೆಗಾ ಮೀಟಿಂಗ್!

ಬೆಂಗಳೂರು : ಕೇಂದ್ರ ಬಜೆಟ್‌ ಘೋಷಣೆ ಮುಗಿದ ಬೆನ್ನಲ್ಲೇ ರಾಜ್ಯ ಬಜೆಟ್ ಮಂಡಿಸಲು ಕಾಂಗ್ರೆಸ್ ಸರ್ಕಾರ ಭರ್ಜರಿ ಸಿದ್ದತೆ ನಡೆಸುತ್ತಿದೆ. ಮುಂದಿನ ತಿಂಗಳು ಮಾರ್ಚ್‌ನಲ್ಲಿ ದಾಖಲೆಯ 16ನೇ ಬಜೆಟ್‌ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗಾಗಲೇ ವಿವಿಧ ಇಲಾಖೆಗಳ ಬೇಡಿಕೆಗಳ ಕುರಿತು ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ.

ಕಳೆದ ಭಾನುವಾರ ಮಂಡಿನೋವಿಗೆ ಚಿಕಿತ್ಸೆ ಪಡೆದ ಬಳಿಕ ನಾಲ್ಕು ದಿನಗಳ ವಿಶ್ರಾಂತಿ ಪಡೆದಿದ್ದ ಸಿಎಂ ಸಿದ್ದರಾಮಯ್ಯ, ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿಯೇ ಬಜೆಟ್ ಪೂರ್ವಭಾವಿ ಸಭೆಗಳನ್ನು ನಿಗದಿ ಪಡಿಸಿದ್ದರು.

ಅದರಂತೆ ಕಳೆದ ಮೂರು ದಿನಗಳಲ್ಲಿ 35 ಇಲಾಖೆಗಳೊಂದಿಗೆ ಬಜೆಟ್ ಬೇಡಿಕೆ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸಮಾಲೋಚನೆ ನಡೆಸಿದ್ದಾರೆ. ಮೊದಲ ದಿನ ಗೃಹ ಇಲಾಖೆ, ಇಂಧನ, ಲೋಕೋಪಯೋಗಿ ಸೇರಿದಂತೆ 13 ಇಲಾಖೆಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಎರಡನೇ ದಿನವಾದ ಶುಕ್ರವಾರ ಸಮಾಜ ಕಲ್ಯಾಣ, ಕಂದಾಯ, ಕೃಷಿ, ಜಲಸಂಪನ್ಮೂಲ, ವಸತಿ ಸೇರಿದಂತೆ 10 ಇಲಾಖೆಗಳೊಂದಿಗೆ ಬೇಡಿಕೆಗಳ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಬಹುತೇಕ ಸಚಿವರು ಕೆಲವು ವಿಶೇಷ ಯೋಜನೆಗಳ ಪಟ್ಟಿ ನೀಡಿ ಬಜೆಟ್​ನಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೆ ಮುಂದಿಟ್ಟಿದ್ದಾರೆ

ಇನ್ನು ಸರ್ಕಾರಿ ರಜೆ ದಿನವಾದರೂ ಶನಿವಾರ ಸಾರಿಗೆ, ಮುಜರಾಯಿ, ಉನ್ನತ ಶಿಕ್ಷಣ ಅರಣ್ಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ 12 ಇಲಾಖೆಗಳ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಸಿಎಂ ಸಮಾಲೋಚನೆ ನಡೆಸಿದ್ದು, ಗ್ಯಾರಂಟಿ ಯೋಜನೆಗಳಿಗೆ ವಿಶೇಷವಾಗಿ ಅನುದಾನ ಮೀಸಲಿರಿಸಬೇಕಾಗಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಇಲಾಖೆಗಳ ಸಚಿವರು ಕೆಲವು ಮಹತ್ವದ ಯೋಜನೆಗಳ ಪ್ರಸ್ತಾವನೆಗಳನ್ನು ಸಿಎಂ ಮುಂದಿಟ್ಟು ಮುಂಗಡ ಪತ್ರದಲ್ಲಿ ಹೆಚ್ಚುವರಿ ಅನುದಾನಕ್ಕೆ ಅವಕಾಶ ಮಾಡಿಕೊಡುವಂತೆ ಬೇಡಿಕೆ ಮಂಡಿಸಿದ್ದಾರೆ.

Btv Kannada
Author: Btv Kannada

Leave a Comment

Read More