ರಾಜ್ಯ ಯುವ ಕಾಂಗ್ರೆಸ್​ಗೆ ಹೊಸ ಕ್ಯಾಪ್ಟನ್ – ಅಭೂತ ಪೂರ್ವ ಗೆಲುವು ಸಾಧಿಸಿದ ಮಂಜುನಾಥ ಗೌಡ!

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಜಿದ್ದಾಜಿದ್ದಿನ ಕದನದಲ್ಲಿ ಮಂಜುನಾಥ್ ಗೌಡ ಗೆದ್ದು ಬೀಗಿದ್ದಾರೆ.

ರಾಜ್ಯ ಯುವ ಕಾಂಗ್ರೆಸ್​ನ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ಮಂಜುನಾಥ್​​ ಗೌಡ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ದೀಪಿಕಾ ರೆಡ್ಡಿ ಅವರನ್ನು 2,77,000 ಮತಗಳ ಅಂತರದಿಂದ ಸೋಲಿಸಿ ದಾಖಲೆಯ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಕಾಂಗ್ರೆಸ್​ನ ನೂತನ ಅಧ್ಯಕ್ಷ ಸ್ಥಾನದ ಚುನಾವಣೆ ಅಖಾಡದಲ್ಲಿ ಬರೋಬ್ಬರಿ 13 ಮಂದಿಯಿದ್ದರು. ಇದರಲ್ಲಿ ಮಂಜುನಾಥ್ 5,67,000 ಮತಗಳನ್ನ ಪಡೆದರೆ ಅವರ ಪ್ರತಿಸ್ಪರ್ಧಿ ದೀಪಿಕಾ ರೆಡ್ಡಿ ಅವರಿಗೆ 2,90,000 ಮತಗಳು ದೊರೆತಿವೆ.

NSUI ವಿದ್ಯಾರ್ಥಿ ಸಂಘಟನೆಯಿಂದ ರಾಜಕೀಯಕ್ಕೆ ಎಂಟ್ರಿಯಾದ ಮಂಜುನಾಥ್, ಕಾಂಗ್ರೆಸ್​ನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇದಕ್ಕೂ ಮುನ್ನ ಎರಡು ಬಾರಿ NSUY ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ಅನುಭವ ಪಡೆದಿದ್ದರು. ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮತ್ತು ಕಾರ್ಯಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಮಂಜುನಾಥ್, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಎಲ್ಲರಿಂದ ಸೈ ಎನಿಸಿಕೊಂಡಿದ್ದರು. ಅಂದ್ಹಾಗೆ ಮಂಜುನಾಥ್ ಗೌಡ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಡಿಸಿಎಂ ಡಿಕೆಶಿಯವರ ಬಲಗೈ ಬಂಟ ಎಂದೇ ಕರೆಯಿಸಿಕೊಂಡಿದ್ದಾರೆ.

ಮಂಜುನಾಥ್ ಗೌಡ ಜೊತೆಗೆ ರಾಜ್ಯ ರಾಜಕಾರಣಕ್ಕೆ ಸತೀಶ್​ ಜಾರಕಿಹೊಳಿ ಪುತ್ರ ರಾಹುಲ್ ಕೂಡ ಎಂಟ್ರಿ ಕೊಟ್ಟಿದ್ದು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಗೆಲುವು ದಾಖಲಿಸಿದ್ದಾರೆ. ಇವರು ಸುಮಾರು 1.80 ಲಕ್ಷ ಮತ ಪಡೆದು ಗೆದ್ದು ಬೀಗಿದ್ದಾರೆ.

ಇನ್ನು ಯುವ ಕಾಂಗ್ರೆಸ್ ಸಾರಥ್ಯ ಪಡೆದಿರುವ ಮಂಜುನಾಥ್ ತಂಡಕ್ಕೆ ಸಾಕಷ್ಟು ಸವಾಲುಗಳಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುವ ಮತದಾರರನ್ನ ಸೆಳೆಯುವ ಕೆಲಸ, ಗ್ಯಾರಂಟಿ ಯೋಜನೆಗಳ ಪ್ರಚಾರ, ಯುವ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ವಿಚಾರಗಳನ್ನ ಪ್ರಚಾರ ನಡೆಸಬೇಕಿದೆ. ಯುವ ಕಾಂಗ್ರೆಸ್​ಗೆ ಹೊಸ ಚೈತನ್ಯ ನೀಡುವಲ್ಲಿ, ಯುವ ಕಾಂಗ್ರೆಸ್ ಪದಾಧಿಕಾರಿಗಳ ಮಂಜುನಾಥ್ ತಂಡ ಯಾವ ರೀತಿ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಲಿದೆ ಅನ್ನೋದು ಕಾದುನೋಡಬೇಕಿದೆ.

ಇದನ್ನೂ ಓದಿ : http://ದಿಲ್ಲಿ ಆಳಿದ್ದ ಅರವಿಂದ್ ಕೇಜ್ರಿವಾಲ್​​ಗೆ ಹೀನಾಯ ಸೋಲು – ಎಎಪಿ ವರಿಷ್ಠಗೆ ಭಾರೀ ಮುಖಭಂಗ!

Btv Kannada
Author: Btv Kannada

Leave a Comment

Read More