ಬೆಂಗಳೂರು : ರಾಜ್ಯದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆಯನ್ನು ಸಿಬಿಐಗೆ ನೀಡಬೇಕಾ ಬೇಡ್ವೋ ಎನ್ನುವುದರ ಕುರಿತು ಹೈಕೋರ್ಟ್ ತೀರ್ಪು ನೀಡಲಿದೆ. ಮತ್ತೊಂದೆಡೆ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ತೀರ್ಪು ಕೂಡ ಇಂದೇ ಪ್ರಕಟವಾಗಲಿದೆ. ಹಾಗಾಗಿ ಹಾಲಿ ಮತ್ತು ಮಾಜಿ ಸಿಎಂ ಇಂದು ಮಹತ್ವದ ದಿನವಾಗಿದೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್, ಇಂದು (ಫೆ.07) ಆದೇಶ ಪ್ರಕಟಿಸಲಿದೆ. ಮುಡಾ ನಿವೇಶನ ಹಂಚಿಕೆ ಸಂಬಂಧ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಇಂದು ಬೆಳಗ್ಗೆ 10.30ಕ್ಕೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ಕೋರ್ಟ್ ತೀರ್ಪು ಏನು ನೀಡುತ್ತೋ ಎನ್ನುವ ಢವಢವ ಸಿದ್ದರಾಮಯ್ಯನವರಿಗೆ ಶುರುವಾಗಿದೆ.
ಇಂದೇ ಮಾಜಿ ಸಿಎಂ ಬಿಎಸ್ವೈ ವಿರುದ್ಧದ ಪೋಕ್ಸೋ ಕೇಸ್ ತೀರ್ಪು ಪ್ರಕಟ : ಅತ್ತ ಧಾರವಾಡ ಹೈಕೋರ್ಟ್ ಪೀಠದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕರಣದ ತೀರ್ಪು ಪ್ರಕಟವಾಗುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ತೀರ್ಪು ಹೊರಬೀಳಲಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತೀರ್ಪು ನೀಡಲಿದೆ. ಪ್ರಕರಣ ರದ್ದು ಕೋರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ನೀಡಲಿದೆ.
ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಇಬ್ಬರು ಕರ್ನಾಟಕದ ಹಿರಿಯ ರಾಜಕಾರಣಿಗಳು. ಹೀಗಾಗಿ ಇಂದಿನ ಕೋರ್ಟ್ ತೀರ್ಪು ಇಬ್ಬರ ಭವಿಷ್ಯ ನಿರ್ಧರಿಸಲಿದೆ. ಇನ್ನು ಈ ಇಬ್ಬರು ನಾಯಕರ ಅಭಿಮಾನಿಗಳ ಚಿತ್ತ ಕೋರ್ಟ್ನತ್ತ ನೆಟ್ಟಿದ್ದು, ತೀರ್ಪು ಏನು ಬರುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : http://ಗಿಲ್, ಅಯ್ಯರ್, ಅಕ್ಷರ್ ಆರ್ಭಟಕ್ಕೆ ಮಣಿದ ಆಂಗ್ಲರು – ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ!









