ಬಿಗ್ ಬಾಸ್ ಕನ್ನಡ ಸೀಸನ್-11ರ ವಿನ್ನರ್ ಹನುಮಂತು ಲಮಾಣಿ 5 ಕೋಟಿಗೂ ಹೆಚ್ಚು ವೋಟ್ ಪಡೆದು ಗೆಲುವಿನ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಹನುಮಂತು ಗೆಲುವು ಹಲವರಿಗೆ ಬೇಸರ ತಂದಿದೆ. ಸಿಂಪತಿ ಕಾರ್ಡ್, ಜಾತಿ ಹೀಗೆ ಏನ್ ಏನೋ ಹೇಳಿ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಹನುಮಂತು ಪರ ನಿಂತ ನೆಟ್ಟಿಗರು ಯಾರೆಲ್ಲಾ ಈ ರೀತಿ ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್ಬಾಸ್ ಸ್ಪರ್ಧಿ ನಟಿ ಹಂಸ ಅವರು ಸಂದರ್ಶನ ಒಂದರಲ್ಲಿ ಹನುಮಂತು ಬಗ್ಗೆ ಮಾತನಾಡಿದ್ದರು. ‘ನಾವು ಶಾಲೆ ಕಾಲೇಜ್ಗಳಲ್ಲಿ ಓದುತ್ತಿದ್ದಾಗ ಜನರಲ್ ಕ್ಯಾಟಗರಿ ಅವರು ಎಷ್ಟೇ ಓದಿದ್ರೂ ಕಡೆಗಣಿಸುತ್ತಿದ್ದರು. ಇಲ್ಲಿ ಬಡವರು, ಹಳ್ಳಿಯವರು ಎಂದು ತಕ್ಷಣ ಜನ ತಲೆ ಮೇಲೆ ಹೊತ್ತು ಮೆರೆಸುತ್ತಾರೆ’ ಎಂದು ಹಂಸ ಹೇಳಿದ್ದರಂತೆ. ಹಂಸ ಅವರ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪರೋಕ್ಷವಾಗಿ ಹನುಮಂತು ಜಾತಿ ಬಗ್ಗೆ ವಿಚಾರ ತೆಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ನಟಿ ಹಂಸ ಕ್ಷಮೆ ಕೇಳಿದ್ದಾರೆ.

‘ನಮಸ್ತೆ ನಾನು ಹಂಸ. ನಾನು ಒಂದು ಚಾನೆಲ್ನಲ್ಲಿ ಕೊಟ್ಟ ಸಂದರ್ಶನದಲ್ಲಿ ಹೇಳಿರುವ ಆ ಒಂದು ಮಾತು ತುಂಬಾ ಕಾಂಟ್ರವರ್ಸಿ ತಿರುವು ಪಡೆದುಕೊಂಡಿದೆ. ಖಂಡಿತಾ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ. ಕೆಲವರು ಅದನ್ನು ಬೇರೆ ರೀತಿಯಲ್ಲಿ ಅರ್ಥಯಿಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡುತ್ತಿದ್ದಾರೆ. ನನ್ನ ಮಾತಿನಿಂದ ಯಾರಿಗೆಲ್ಲಾ ಬೇಸರ ಆಗಿದೆ ಅವರಿಗೆ ನಾನು ಕ್ಷಮೆ ಕೇಳುತ್ತೀನಿ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ. ದೊಡ್ಡ ಮನಸ್ಸು ಮಾಡಿ ನನ್ನನ್ನು ಕ್ಷಮಿಸಿ ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡಿ’ ಎಂದು ಹಂಸ ಮಾತನಾಡಿದ್ದಾರೆ.

ಇನ್ನು ಹನುಮಂತು ವಿನ್ನರ್ ಆಗಿರುವುದಕ್ಕೆ ಇದು ರಿಯಲ್ ಬಿಗ್ ಬಾಸ್ ಈ ವರ್ಷ ಮೋಸ ಮಾಡಿಲ್ಲ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯ ಹೇಳಿದ್ದಾರೆ.









