ದೇಶಾದ್ಯಂತ ಜಾತಿ ಗಣತಿ ಸಂಘರ್ಷ ಬೆನ್ನಲ್ಲೇ ‘ಕೈ’ ದಿಟ್ಟ ಹೆಜ್ಜೆ – ತೆಲಂಗಾಣದಲ್ಲಿ ಜಾತಿ ಗಣತಿ ವರದಿ ಮಂಡನೆ!

ತೆಲಂಗಾಣ ಜಾತಿಗಣತಿ ವರದಿಯನ್ನು ಸಿಎಂ ರೇವಂತ್ ರೆಡ್ಡಿ ಮಂಗಳವಾರ ಮಂಡಿಸಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಮೀಮ್ ಅಕ್ತರ್ ಒಳ ಮೀಸಲಾತಿ ಆಯೋಗ ಸಿದ್ಧಪಡಿಸಿರುವ ತೆಲಂಗಾಣ ಜಾತಿಗಣತಿ ವರದಿಯನ್ನು ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮಂಡಿಸಲಾಗಿದೆ.

ವರದಿ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ “ಜನಗಣತಿಗಿಂತಲೂ ಕರಾರುವಾಕ್ಕಾಗಿ ಈ ಐತಿಹಾಸಿಕ ಸಮೀಕ್ಷೆ ನಡೆಸಲಾಗಿದೆ. ವರದಿ ದತ್ತಾಂಶಗಳನ್ನು ರಾಜ್ಯದಲ್ಲಿ ಕೈಗೊಳ್ಳುವ ವಿವಿಧ ಕಲ್ಯಾಣ ಯೋಜನೆಗಳಲ್ಲಿ ಬಳಸಿಕೊಳ್ಳಲಾಗುವುದು. ಈ ಮೂಲಕ ರಾಜ್ಯದಲ್ಲಿ ಸಾಮಾಜಿಕ-ರಾಜಕೀಯ ಬದಲಾವಣೆ ತರಲಾಗುವುದು’ ಎಂದಿದ್ದಾರೆ.

ಇನ್ನು ರಾಜ್ಯದ ಶೇ.56.33ರಷ್ಟು ಮಂದಿ ಹಿಂದುಳಿದ ವರ್ಗಗಳಿಗೆ ಸೇರಿದವರೆಂದು ತಿಳಿದುಬಂದಿದ್ದು, ರಾಜಕೀಯ, ಶೈಕ್ಷಣಿಕ, ಉದ್ಯೋಗ ಕ್ಷೇತ್ರಗಳಲ್ಲಿ ಈ ವರದಿಯನ್ನು ಬಳಸಿ ಅವರಿಗೆ ಪ್ರಯೋಜನ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ, ದೇಶಾದ್ಯಂತ ಜಾತಿಗಣತಿ ನಡೆಸುವಂತೆ ಕೇಂದ್ರಕ್ಕೆ ಆಗ್ರಹಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಕಳೆದ ವರ್ಷದ (2024) ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆಸಿದ ಜಾತಿ ಜನಗಣತಿಯ ಪ್ರಕಾರ, ರಾಜ್ಯದ ಒಟ್ಟು ಜನಸಂಖ್ಯೆಯ ಶೇಖಡ 56.33ರಷ್ಟು ಹಿಂದುಳಿದ ಜಾತಿಗಳಿಗೆ ಸೇರಿದ ಜನರು ಇದ್ದಾರೆ. ಹಿಂದುಳಿದ ಜಾತಿಗಳಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯ ಜನರು ಒಳಗೊಂಡಿದ್ದಾರೆ.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮತ್ತು ಜಾತಿ ಸಮೀಕ್ಷೆಯ ಪ್ರಕಾರ, ತೆಲಂಗಾಣದ ಜನಸಂಖ್ಯೆಯಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಶೇಕಡ 46.25ರಷ್ಟು ಹಿಂದುಳಿದ ಜಾತಿಯವರು ಇದ್ದಾರೆ.ಹಿಂದುಳಿದ ಮುಸ್ಲಿಮರ ಜನಸಂಖ್ಯೆ ಶೇಕಡ 10.08ರಷ್ಟಿದೆ.

ಜನಗಣತಿಯ ವರದಿಯ ಪ್ರಕಾರ ತೆಲಂಗಾಣದ ಜಾತಿವಾರು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳು 61,84,319 (17.43%), – ಪರಿಶಿಷ್ಟ ಪಂಗಡಗಳು 37,05,929 (10.45%), ಹಿಂದುಳಿದ ಜಾತಿಗಳು (ಮುಸ್ಲಿಮರನ್ನು ಹೊರತುಪಡಿಸಿ) – 1,64,09,179 (46.25%), ಹಿಂದುಳಿದ ಜಾತಿಯ ಮುಸ್ಲಿಮರು – 35,76,588 (10.08%), ಇತರೆ ಜಾತಿಯ ಮುಸ್ಲಿಮರು – 8,80,424 (2.48%), ಇತರೆ ಜಾತಿಗಳು (ಮುಸ್ಲಿಮರನ್ನು ಹೊರತುಪಡಿಸಿ) – 13.31%, ಮುಸ್ಲಿಮರು (ಒಟ್ಟು) – 12.56%, ಇತರೆ ಜಾತಿಗಳು (ಒಟ್ಟು) 15.79% ಇದ್ದಾರೆ ಎಂದು ರೇವಂತ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ : http://‘One Minute Apology’ ಪುಸ್ತಕ ಓದಿ – ರೂಪಾ, ರೋಹಿಣಿ ಸಿಂಧೂರಿಗೆ ಕೋರ್ಟ್ ಸಲಹೆ!

Btv Kannada
Author: Btv Kannada

Leave a Comment

Read More