ಆನೇಕಲ್ : ನಡುರಸ್ತೆಯಲ್ಲಿ ಪತಿಯೊಬ್ಬ ಪತ್ನಿಗೆ ಏಳೆಂಟು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಅಮಾನುಷ ಘಟನೆ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ. 6 ವರ್ಷದ ಮಗುವನ್ನ ಶಾಲೆಗೆ ಬಿಡಲು ಪತ್ನಿ ತೆರಳಿದ್ದಾಗ ಏಕಾಏಕಿ ಅಟ್ಯಾಕ್ ಮಾಡಿದ ಪತಿರಾಯ, ಪತ್ನಿಗೆ ಚಾಕುವಿನಿಂದ ಚುಚ್ಚಿ, ಚುಚ್ಚಿ ಕ್ರೌರ್ಯ ಮೆರೆದಿದ್ದಾನೆ. ಶ್ರೀಗಂಗಾ (29) ಕೊಲೆಯಾದ ಮಹಿಳೆ. ಮೋಹನ್ ರಾಜು (32) ಪತ್ನಿಯನ್ನು ಕೊಲೆಗೈದ ಪತಿ.
ಇವರಿಬ್ಬರು ಬೆಂಗಳೂರು ಹೊರವಲಯದ ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳು. ಮೋಹನ್ ರಾಜು, ಶ್ರೀಗಂಗಾಗೆ ಮದುವೆಯಾಗಿ 7 ವರ್ಷಗಳಾಗಿದ್ದು 6 ವರ್ಷದ ಮಗನಿದ್ದ. ಮೋಹನ್ ರಾಜ್ ಸ್ನೇಹಿತನ ಜೊತೆಗೆ ಶ್ರೀಗಂಗಾಳಿಗೆ ಅಕ್ರಮ ಸಂಬಂಧ ಇರುವ ಶಂಕೆ ಇತ್ತಂತೆ. 2-3 ವರ್ಷದಿಂದ ಮೋಹನ್ ರಾಜ್ ಪತ್ನಿ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ. ಇದೇ ವಿಚಾರಕ್ಕೆ ಕಳೆದ 8 ತಿಂಗಳಿನಿಂದ ಪತಿ-ಪತ್ನಿ ದೂರವಾಗಿದ್ರು. ನಿನ್ನೆ ರಾತ್ರಿ ಮೋಹನ್ ರಾಜ್ ತನ್ನ ಮಗುವನ್ನ ನೋಡಲು ಮನೆಗೆ ತೆರಳಿದ್ದ. ಈ ವೇಳೆ ಪತ್ನಿ ಶ್ರೀಗಂಗಾ ಜೊತೆ ಗಲಾಟೆ ಮಾಡಿದ್ದ ಎನ್ನಲಾಗಿದೆ.
ಇಂದು ಬೆಳಗ್ಗೆ ಶ್ರೀಗಂಗಾ ಮಗುವನ್ನ ಶಾಲೆಗೆ ಬಿಡಲು ಬಂದಿದ್ದ ವೇಳೆ ಕಾದು ಕುಳಿತಿದ್ದ ಪತಿ ಮೋಹನ್ ರಾಜ್, ಪತ್ನಿ ಶ್ರೀಗಂಗಾ ಮೇಲೆ ಅಟ್ಯಾಕ್ ಮಾಡಿ 7-8 ಬಾರಿ ಚಾಕುವಿನಿಂದ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದಿದ್ದ ಶ್ರೀಗಂಗಾನ್ನು ಸ್ಥಳೀಯರು ಆಸ್ಪತ್ರೆಗೆ ರವಾನೆ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಂಗಾ ಸಾವನ್ನಪ್ಪಿದ್ದಾರೆ. ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್ ರಾಜ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : https://btvkannada.com/2025/02/05/toxic-shooting-banglore-nayanathara/
