ಬೆಂಗಳೂರು : 2025ನೇ ಸಾಲಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1 ರಿಂದ ಮಾರ್ಚ್ 8ರವರೆಗೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆ ಕುರಿತು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚಲನಚಿತ್ರ ಅಕಾಡೆಮಿ ಹಾಗೂ ಚಲನಚಿತ್ರೋದ್ಯಮಿಗಳ ಜೊತೆ ಗೃಹ ಕಚೇರಿ ಕೃಷಾದಲ್ಲಿ ನಿನ್ನೆ ಸಭೆ ನಡೆಸಲಾಯಿತು.
ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಮಾರ್ಚ್1ರಿಂದ ಪ್ರಾರಂಭವಾಗಿ ಮಾರ್ಚ್ 8ರವರೆಗೂ ಸಮಾರಂಭ ನಡೆಯಲಿದೆ. ಈ ವರ್ಷ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಲ್ಲಿ ಚಲನಚಿತ್ರೋತ್ಸವ ನಡೆಸಲಾಗುತ್ತದೆ. ಕಳೆದ ವರ್ಷ ʻಸಾಮಾಜಿಕ ನ್ಯಾಯʼ ಥೀಮ್ ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು” ಎಂದು ಸಿಎಂ ತಿಳಿಸಿದರು.
ಈ ಬಾರಿ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳು 13 ಚಿತ್ರಮಂದಿರದಲ್ಲಿ ಪ್ರದರ್ಶನ ಆಗಲಿವೆ. ಒಟ್ಟು 400 ಶೋಗಳು ಇರಲಿವೆ. ಬೆಂಗಳೂರು ನಾಗರಿಕರಿಗೆ ಬೇರೆ ಬೇರೆ ದೇಶ, ಭಾಷೆ ನೋಡೋ ಸುವರ್ಣ ಅವಕಾಶ ಸಿಗಲಿದೆ. 2006ರಲ್ಲಿ ಆರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ. ಈ ಬಾರಿ 9 ಕೋಟಿ ರೂಪಾಯಿ ವೆಚ್ಚದಲ್ಲಿ ಚಲನಚಿತ್ರೋತ್ಸವನ್ನು ಆಯೋಜಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡರು.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು, ಬೆಂಗಳೂರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನೆಮಾ ಸಂಸ್ಕೃತಿಯ ಮುಖ್ಯ ಕೇಂದ್ರವಾಗಿ ಬೆಳೆದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯ ಸರ್ಕಾರ ಚಲನಚಿತ್ರೋತ್ಸವ ನಡೆಸಲಿದೆ. ಪ್ರತಿ ಆವೃತ್ತಿಯಂತೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಈ ಬಾರಿ ಭಾಗವಹಿಸಲಿದ್ದು, ಚಲಚಿತ್ರೋತ್ಸವಕ್ಕೆ ಯಾರನ್ನು ರಾಯಭಾರಿಯಾಗಿ ಆಯ್ಕೆ ಮಾಡಬೇಕು ಎಂಬುದನ್ನು ಸಮಿತಿ ನಿರ್ಧರಿಸಲಿದೆ ಎಂದು ತಿಳಿಸಿದರು.
ಇನ್ನು ಈ ಬಾರಿಯು ಕೂಡ ಚಲನಚಿತ್ರೋತ್ಸವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ನಟ ಡಾಲಿ ಭಾವನಾ, ನೀನಾಸಂ ಸತೀಶ್, ಸಾಧುಕೋಕಿಲ ಚಿತ್ರರಂಗದ ಪ್ರಮುಖರು ಭಾಗಿಯಾಗಿದ್ದರು.
ಇದನ್ನೂ ಓದಿ : ಹೊಸ ವರ್ಷದ ಆರಂಭದಲ್ಲೇ ಬಿಗ್ ಶಾಕ್.. ಸ್ಟಾರ್ ನಟನಿಗೆ ಅನಾರೋಗ್ಯ – ಫ್ಯಾನ್ಸ್ ಆತಂಕ.. ಹೆಲ್ತ್ ಬುಲೆಟಿನ್ನಲ್ಲಿ ಏನಿದೆ ?