ಅಯೋಧ್ಯೆ : ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರ ಲಕ್ಷಾಂತರ ಹಿಂದೂಗಳ ನಂಬಿಕೆ, ಭಕ್ತಿ ಮತ್ತು ಪರಿಶ್ರಮದ ಸಂಕೇತವಾಗಿದ್ದು, ಅಲ್ಲಿ 2024ರ ಜನವರಿ 22ರಂದು ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆ ನೆರವೇರಿತ್ತು. ಕಳೆದ ಒಂದು ವರ್ಷದಿಂದ ಅಯೋಧ್ಯೆ ದೇಶದ ಗಮನ ಸೆಳೆಯುತ್ತಿದ್ದು, ಅದಕ್ಕೆಲ್ಲ ಕಾರಣ ರಾಮಲಲ್ಲಾನ ಭವ್ಯ ಮಂದಿರ. ಭವ್ಯ ಮಂದಿರ ಆರಂಭವಾಗಿ ಇದೀಗ ಒಂದು ವರ್ಷ ತುಂಬಿದ್ದು, ಹಿನ್ನೆಲೆ ಇಂದಿನಿಂದ ಮೂರು ದಿನ ಅದ್ದೂರಿ ವಾರ್ಷಿಕೋತ್ಸವ ನಡೆಯಲಿದೆ.
ವರ್ಷ ತುಂಬಿದ ಖುಷಿಯಲ್ಲಿ ಅದ್ಧೂರಿ ಕಾರ್ಯಕ್ರಮ : 2024 ಜ.22ರಂದು ಭವ್ಯವಾದ ಮಂದಿರ ಉದ್ಘಾಟನೆಯಾಗಿತ್ತು. ಆದರೆ ಹಿಂದೂ ಪಂಚಾಂಗದ ಪ್ರಕಾರ ಈ ಸಂಭ್ರಮಕ್ಕೆ ಜ.11ರಂದು ವರ್ಷ ಪೂರ್ಣಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಜ.11ರಿಂದ 13ರವರೆಗೆ ಪ್ರತಿಷ್ಠಾ ವಾರ್ಷಿಕೋತ್ಸವ (ಪ್ರತಿಷ್ಠಾ ದ್ವಾದಶಿ) ಹಮ್ಮಿಕೊಳ್ಳಳಲಾಗಿದೆ. ಮೊದಲ ದಿನವಾದ ಇಂದು ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಾಲ ರಾಮನಿಗೆ ಅಭಿಷೇಕ ನೆರವೇರಿಸಲಿದ್ದಾರೆ. ಮಂದಿರದ ಸಮೀಪವಿರುವ ಅಂಗದ ಟೀಲಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜತೆಗೆ, ಖ್ಯಾತ ಗಾಯಕರ ಭಕ್ತಿ ಗೀತೆಗಳೂ ಬಿಡುಗಡೆಗೊಳ್ಳಲಿವೆ. ದೇಶಾದ್ಯಂತವಿರುವ ಸಂತರು ಹಾಗೂ ಭಕ್ತರಿಗೆ ಟ್ರಸ್ಟ್ ಆಮಂತ್ರಣ ಕಳಿಸಿದೆ.
ಉದ್ಘಾಟನೆಗೊಂಡ ವರ್ಷದೊಳಗೇ ಅಯೋಧ್ಯೆ ರಾಮಮಂದಿರ ದೇಶದ ನಂ.1 ಪ್ರವಾಸಿ ತಾಣ ಅಥವಾ ಭಕ್ತಾದಿಗಳ ನೆಚ್ಚಿನ ಭೇಟಿಯ ತಾಣವಾಗಿ ಹೊರಹೊಮ್ಮಿದೆ. 2024ರ ಜನವರಿ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ ಸುಮಾರು 47 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಪೈಕಿ ಅಯೋಧ್ಯೆ ಒಂದಕ್ಕೇ 13.3 ಕೋಟಿ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಅದರಲ್ಲಿ 3,153 ವಿದೇಶಿಗರೂ ಕೂಡ ಸೇರಿದ್ದಾರೆ. ಮಂದಿರದಿಂದ ರಾಜ್ಯದ ಪ್ರವಾಸೋದ್ಯಮದ ನಕಾಶೆಯನ್ನೇ ಬದಲಿಸಿದೆ. ಹಬ್ಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ದೀಪಾವಳಿ ಸಂದರ್ಭದಲ್ಲಿ ಸರಯೂ ನದಿಯ ದಂಡೆಯ ಮೇಲೆ 22 ಲಕ್ಷ ಹಣತೆಗಳನ್ನು ಸರ್ಕಾರ ಬೆಳಗಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿತು. ರಾಮಮಂದಿರ ಸುರಕ್ಷತೆ ನಿರ್ವಹಣೆಗೆ ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪ್ರತಿಷ್ಠಿತ ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿಯನ್ನು ರಾಮಮಂದಿರ ಪಡೆದುಕೊಂಡಿದೆ.
ಕನ್ನಡಿಗನ ಕೈಯಲ್ಲಿ ಅರಳಿದ ರಾಮಲಲ್ಲಾ : ಅಯೋಧ್ಯೆ ರಾಮಮಂದಿರದ ಮುಖ್ಯ ವಿಗ್ರಹವನ್ನು ಕೆತ್ತಿದ್ದು ಮೈಸೂರಿನ ಅರುಣ್ ಯೋಗಿರಾಜ್. ವಿಗ್ರಹ ಕೆತ್ತುವಿಕೆಗೆ ಮೂರು ಜನರನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ ಕನ್ನಡಿಗರಾದ ಅರುಣ್ ಯೋಗಿರಾಜ್, ಉತ್ತರ ಕನ್ನಡದ ಹೊನ್ನಾವರದ ಇಡಗುಂಜಿಯ ಗಣೇಶ್ ಭಟ್ ಮತ್ತು ರಾಜಸ್ಥಾನದ ಇನ್ನೊಬ್ಬ ಶಿಲ್ಪಿ. ಈ ಪೈಕಿ ಅಂತಿಮವಾಗಿ ಅರುಣ್ ಕೆತ್ತಿದ ವಿಗ್ರಹ ಆಯ್ಕೆಯಾಗಿತ್ತು. ಇದು, 51 ಇಂಚುಗಳ ಎತ್ತರವನ್ನು ಹೊಂದಿದೆ. ಭಗವಾನ್ ಶ್ರೀರಾಮನು ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ 5 ವರ್ಷದ ಮಗುವಿನ ರೂಪದಲ್ಲಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಮತ್ತೆ ಗುಂಡಿನ ಸದ್ದು – ಅಕ್ರಮವಾಗಿ ಡ್ರಗ್ ಸಪ್ಲೈ ಮಾಡ್ತಿದ್ದ ಆರೋಪಿ ಮೇಲೆ ಪೊಲೀಸರ ಫೈರಿಂಗ್!