ತಿರುಪತಿ : ತೀವ್ರ ಮಳೆಯ ಕೊರತೆಯಿಂದಾಗಿ ಶ್ರೀ ಕ್ಷೇತ್ರ ತಿರುಮಲದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಡ್ಯಾಂಗಳಲ್ಲಿ 120-130 ದಿನಕ್ಕೆ ಸಾಕಾಗುವಷ್ಟು ಮಾತ್ರ ನೀರಿದೆ. ಹೀಗಾಗಿ ತಿರುಮಲ ತಿರುಪತಿ ದೇವಸ್ಥಾನ ಸಮಿತಿಯು (ಟಿಟಿಡಿ) ಭಕ್ತರು ನೀರನ್ನು ಮಿತವಾಗಿ ಬಳಸಬೇಕು ಎಂದು ಸೂಚಿಸಿದೆ ಹಾಗೂ ಮುಂದಿನ ದಿನಗಳಲ್ಲಿ ನೀರಿನ ಬಳಕೆಗೆ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.
ತಿರುಮಲವು ಪಾಪವಿನಾಶನಂ ಅಣೆಕಟ್ಟು, ಆಕಾಶ ಗಂಗೆ, ಗೋಗರ್ಭಂ, ಕುಮಾರಧಾರ-ಪಸುಪುಧಾರ ಮತ್ತು ಕಲ್ಯಾಣಿ ಜಲಾಶಯಗಳ ನೀರಿನ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ವೆಂಕಟೇಶ್ವರ ದೇವಸ್ಥಾನ ದಿನಕ್ಕೆ ಸುಮಾರು 70 ಸಾವಿರದಿಂದ 1 ಲಕ್ಷ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ ಮತ್ತು ದಿನಕ್ಕೆ ಸುಮಾರು 43 ಲಕ್ಷ ಗ್ಯಾಲನ್ ನೀರು ಅಗತ್ಯವಿದೆ. ಆದರೆ, ಈ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟವು ವೇಗವಾಗಿ ಖಾಲಿಯಾಗುತ್ತಿರುವುದು ತಿರುಪತಿ ಟ್ರಸ್ಟ್‌ಗೆ ಕಳವಳ ಉಂಟುಮಾಡಿದೆ.
TTD ಪ್ರಕಾರ, ತಿರುಮಲ ಸುತ್ತಲಿನ ಎಲ್ಲ 5 ಅಣೆಕಟ್ಟುಗಳ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 14,304 ಲಕ್ಷ ಗ್ಯಾಲನ್‌ಗಳು. ಆದಾಗ್ಯೂ, ಈಗ ಕೇವಲ 5,800 ಲಕ್ಷ ಗ್ಯಾಲನ್ ಮಾತ್ರ ಲಭ್ಯವಿದೆ. ಈ ನೀರು ಇನ್ನು 120-130 ದಿನಗಳಿಗೆ ಮಾತ್ರ ಸಾಕಾಗುತ್ತದೆ. ಈಗ ಮಳೆ ಬಾರದೇ ಹೋದರೆ ಡಿಸೆಂಬರ್ ನಂತರ ಜಲಕ್ಷಾಮ ಉಂಟಾಗುವ ಭೀತಿ ಇದೆ. ಹಾಗಾಗಿ ಆದಷ್ಟು ಕಡಿಮೆ ನೀರು ಬಳಸುವಂತೆ ಭಕ್ತರಿಗೆ TTD ಕರೆ ನೀಡಿದೆ. ನೀರನ್ನು ವ್ಯರ್ಥ ಮಾಡಬೇಡಿ, ಮಿತವಾಗಿ ಬಳಸಿ ಎಂದ TTD ಭಕ್ತರಿಗೆ ಮನವಿ ಮಾಡಿದೆ.
ಇದನ್ನೂ ಓದಿ : ಶ್ರೀಕೃಷ್ಣ ಜನ್ಮಾಷ್ಟಮಿಗೆ ಕೃಷ್ಣ ನಗರಿ ಉಡುಪಿ ಸಜ್ಜು – ಗೋಪಿಲೋಲನಿಗೆ ಈ ಬಾರಿ 108 ಬಗೆಯ ಲಡ್ಡು..!