ಬೆಂಗಳೂರು : ರೈತರ ಜಮೀನಿನಲ್ಲಿ ನಮೂದಾಗಿರುವ ವಕ್ಫ್ ಹೆಸರು ತಿದ್ದುಪಡಿಗೆ ಸಿಎಂ ಸೂಚಿಸಿದ್ದಾರೆ. ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್‌ಗೆ ಆದೇಶ ನೀಡಿದ್ದಾರೆ. ಹೀಗಿದ್ದರೂ ರಾಜ್ಯದಲ್ಲಿ ವಕ್ಫ್ ವಿವಾದ ತಣ್ಣಗಾಗಿಲ್ಲ. ಇದರ ನಡುವೆ ಸರ್ಕಾರದ ವಿರುದ್ಧ ಇಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಸರ್ಕಾರದ ವಿರುದ್ಧ ಬೀದಿಗಳಿಯಲು ಸಜ್ಜಾಗಿದ್ದು, ವಕ್ಫ್ ಆಸ್ತಿ ಕುರಿತಂತೆ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು. ಅಧಿಕಾರ ದುರ್ಬಳಕೆ ಕುರಿತು CBI ತನಿಖೆ ನಡೆಸಬೇಕು. ವಕ್ಫ್ ಸಚಿವ ಜಮೀರ್ ಅಹ್ಮದ್ರನ್ನ ಸಂಪುಟದಿಂದ ವಜಾಗೊಳಿಸಬೇಕು. ಹಾಗೆಯೇ ಇನ್ನು ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಬಿಜೆಪಿ ಪ್ರೊಟೆಸ್ಟ್ ನಡೆಸಲು ತಯಾರಿ ನಡೆಸಿದೆ.
ಬೆಂಗಳೂರಿನಲ್ಲಿ ನಾಲ್ಕು ಕಡೆ ಬಿಜೆಪಿ ಬೃಹತ್ ಪ್ರೊಟೆಸ್ಟ್ ನಡೆಸಲಿದ್ದು, ಕೆ.ಆರ್ ಪುರಂನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಯಲಹಂಕದಲ್ಲಿ ಶಾಸಕ ವಿಶ್ವನಾಥ್, ಕೆಂಗೇರಿಯಲ್ಲಿ ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ವಕ್ಫ್ ಬೋರ್ಡ್ ವಿರುದ್ಧ ಬಿಜೆಪಿ ಕರೆ ಕೊಟ್ಟಿರುವ ಪ್ರತಿಭಟನೆಗೆ ರೈತ ಸಂಘಟನೆಗಳು ಕೂಡ ಸಾಥ್ ನೀಡಿವೆ. ಬೆಳಗಾವಿ, ವಿಜಯಪುರದಲ್ಲಿ ಪ್ರತಿಭಟನೆಗೆ ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ.
ಒಟ್ಟಿನಲ್ಲಿ ಆಡಳಿತ ಮತ್ತು ವಿಪಕ್ಷದ ನಡುವೆ ವಕ್ಫ್ ಆಸ್ತಿ ಗದ್ದಲ ರಾಜ್ಯದಲ್ಲಿ ತಾರಕಕ್ಕೇರಿದ್ದು, ಮಾತಿನ ಜಟಾಪಟಿಯು ಜೋರಾಗಿದೆ. ಮುಂದಿನ ದಿನಗಳಲ್ಲಿ ಇನ್ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ : ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದವರ ದುರಂತ ಅಂತ್ಯ.. ನೀರಿನ ಹೊಂಡದಲ್ಲಿ ಮುಳುಗಿ ಮೂವರು ಸಾವು..!