ಕಾನ್ಪುರ : ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದ ಪುಟದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಬಾಂಗ್ಲಾ ವಿರುದ್ಧದ ಈ ಪಂದ್ಯದಲ್ಲಿ 35ರನ್ ಪೂರೈಸಿದ ತಕ್ಷಣ, ಭಾರತದ ಶ್ರೇಷ್ಠ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ವಿರಾಟ್ ಹೊಸ ದಾಖಲೆ ಮಾಡಿದರು.
2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ, 35 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ 47 ರನ್ ಬಾರಿಸಿದರು. ಈ 47 ರನ್ಗಳೊಂದಿಗೆ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 27 ಸಾವಿರ ರನ್ ಪೂರೈಸಿದ್ದಾರೆ.
ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ 600ಕ್ಕಿಂತ ಕಡಿಮೆ ಇನಿಂಗ್ಸ್ಗಳಲ್ಲಿ 27 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅತೀ ವೇಗವಾಗಿ 27000 ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಸಹ ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 623 ಇನಿಂಗ್ಸ್ಗಳ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 27 ಸಾವಿರ ರನ್ ಪೂರೈಸಿದ್ದರು. ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ 27000+ ರನ್ ಕಲೆಹಾಕಿದ್ದಾರೆ. ಇವರು 648 ಇನಿಂಗ್ಸ್ಗಳ ಮೂಲಕ 27 ಸಾವಿರ ರನ್ ಪೂರೈಸಿದ್ದರು. ಹಾಗೆಯೇ 650 ಇನಿಂಗ್ಸ್ಗಳಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 27ಸಾವಿರ ರನ್ ಕಲೆಹಾಕಿದ್ದಾರೆ. ಇದೀಗ ಕೇವಲ 594 ಇನಿಂಗ್ಸ್ಗಳ 27 ಸಾವಿರ ರನ್ ಪೂರೈಸಿ ವಿರಾಟ್ ಕೊಹ್ಲಿ 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ : ಮುಡಾ ಕೇಸ್ನಲ್ಲಿ ಸಿಎಂ ಆಯ್ತು, ಸಿಎಂ ಪತ್ನಿ ಆಯ್ತು, ಇದೀಗ ಪುತ್ರ ಯತೀಂದ್ರಗೂ ಸಂಕಷ್ಟ..!