ಬೆಂಗಳೂರು : ಕರ್ನಾಟಕದ ವಿಧಾನಸಭೆಯ ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ. ಇದೀಗ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜನರು ಮತ ನೀಡಿದ್ದಾರೆ. ಗ್ಯಾರಂಟಿ ಮತ್ತು ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜನರು ಮತ ನೀಡಿದ್ದಾರೆ. ಸಮೀಕ್ಷೆಗಳು ಸುಳ್ಳಾಗುತ್ತವೆ ಅಂತ ನಾನು ನಿನ್ನೆ ಸಂಜೆಯೇ ಹೇಳಿದ್ದೆ. ನಾವು ಮಾಡುವ ಸಮೀಕ್ಷೆಯೇ ಬೇರೆ ಅಂತ ಹೇಳಿದ್ದೆ ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ನಿಖಿಲ್ ಸೋತಿದ್ದಾರೆ ಎಂದು ಹೇಳಲ್ಲ. ಕುಮಾರಸ್ವಾಮಿ ವಿರುದ್ಧ ಜನ ತೀರ್ಪು ನೀಡಿದ್ದಾರೆ. ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ಸೋಲು ಎಂದು ಹೇಳುವುದಿಲ್ಲ. ಅವರ ತಂದೆ ಬೊಮ್ಮಾಯಿ ಅವರದ್ದು ಎಂದು ಹೇಳುತ್ತೇನೆ ಎಂದರು.
ಇನ್ನು ವಿಪಕ್ಷಗಳು ನಮ್ಮ ಗ್ಯಾರಂಟಿಯನ್ನು ಟೀಕೆ ಮಾಡಿದ್ದವು. ವಿಪಕ್ಷಗಳು ಟೀಕೆ ಮಾಡುವುದನ್ನು ಬಿಡಿ ಎಂದು ಜನ ತೀರ್ಪು ಕೊಟ್ಟಿದ್ದಾರೆ. ಜನರ ಬದುಕಿನ ಮೇಲೆ ರಾಜಕೀಯ ಮಾಡಬೇಡಿ ಅಂತ ಸಂದೇಶ ಜನ ಕೊಟ್ಡಿದ್ದಾರೆ. ಟೀಕೆಗಳು ಸಾಯ್ತವೇ, ಕೆಲಸ ಉಳಿಯತ್ತವೆ. ಇದು ಮತ್ತೊಮ್ಮೆ ಸಾಬೀತಾಗಿದೆ. ಜನರಿಗೆ ಸರಿಯಾಗಿ ಗ್ಯಾರಂಟಿ ಹೋಗುತ್ತಿಲ್ಲ ಎಂದು ವಿಪಕ್ಷಗಳು ಟೀಕಿಸಿದ್ದವು. 56 ಸಾವಿರ ಕೋಟಿ ರೂ. ಗ್ಯಾರಂಟಿಗೆ ಕೊಟ್ಟಿದ್ದೇವೆ. ಪ್ರತಿ ಕ್ಷೇತ್ರಕ್ಕೆ 250 ಕೋಟಿ ರೂ. ಹಣ ಹೋಗಿದೆ. ಇದೆಲ್ಲವು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ನಿಖಿಲ್ ಕುಮಾರಸ್ವಾಮಿಗೆ ಹ್ಯಾಟ್ರಿಕ್ ಸೋಲಿನ ಕಹಿ – ನಿರಂತರ ಸೋಲಿಗೆ ಕಾರಣವಾಯ್ತ ಜಾತಕ ದೋಷ?