ಬೆಂಗಳೂರು : ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಹೆಸರಲ್ಲಿ ಜ್ಯುವೆಲರಿ ಶಾಪ್ ಮಾಲೀಕರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಕೇಸ್ನಲ್ಲಿ ಅರೆಸ್ಟ್ ಆಗಿರುವ ಶ್ವೇತಾಗೌಡ ದೋಖಾ ಕಹಾನಿ ಬಗೆದಷ್ಟು ಬಯಲಾಗ್ತಿದೆ. ರಾಜಕೀಯ ವ್ಯಕ್ತಿಗಳ ಹೆಸರನ್ನು ತನ್ನ ಫೋನ್ನಲ್ಲಿ ಮೈಸೂರು ಪಾಕ್, ರಸಗುಲ್ಲಾ ಎಂದು ಸೇವ್ ಮಾಡಿಕೊಂಡಿದ್ದು ಪೊಲೀಸರ ತನಿಖೆಯಲ್ಲಿ ಭಯಾನಕ ಸೀಕ್ರೆಟ್ಗಳು ಬಯಲಾಗ್ತಿವೆ. ಫೇಸ್ಬುಕ್ ಮೂಲಕ ಕೋಲಾರದ ರಾಜಕೀಯ ನಾಯಕನನ್ನು ಪರಿಚಯ ಮಾಡಿಕೊಂಡಿದ್ದ ಶ್ವೇತಾಗೌಡಗೆ ಆ ಮುಖಂಡ ವೆಂಕಟೇಶ್ವರ ಸ್ವೀಟ್ಸ್ನಲ್ಲಿ ಮೈಸೂರು ಪಾಕ್ ತಂದು ಕೊಟ್ಟಿದ್ದರು. ಹಾಗಾಗಿ ಆತನ ಹೆಸರನ್ನು ಫೋನ್ನಲ್ಲಿ ಮೈಸೂರು ಪಾಕ್ ಎಂದೇ ಸೇವ್ ಮಾಡಿಕೊಂಡಿದ್ದಾಳೆ.
ವ್ಯವಹಾರದ ನೆಪದಲ್ಲಿ ಆ ಮುಖಂಡನಿಗೆ ಹತ್ತಿರವಾಗಿದ್ದ ಶ್ವೇತಾಗೌಡಳಿಗೆ ಸ್ನೇಹದ ಕಾಣಿಕೆಯಾಗಿ ಶ್ವೇತಾಗೆ ಲಕ್ಷ ಲಕ್ಷ ಬೆಲೆಯ ಹೊಸ ಥಾರ್ ಜೀಪ್ ಕೊಡಿಸಿದ್ದರು. ಇದಾದ ಬಳಿಕ ಶ್ವೇತಾಗೌಡಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಜೊತೆಯೂ ನಂಟು ಬೆಳೆದಿತ್ತು. ಇವರಿಬ್ಬರ ಸಲುಗೆ ಎಂಗೇಜ್ಮೆಂಟ್ವರೆಗೂ ಹೋಗಿತ್ತು ಎನ್ನುತ್ತಿವೆ ಆಪ್ತ ಮೂಲಗಳು. ಈ ಆಪ್ತತೆಯನ್ನೇ ಬಳಸಿಕೊಂಡ ಚಾಲಾಕಿ ಶ್ವೇತಾ, ವರ್ತೂರು ಮನೆ ಅಡ್ರೆಸ್ ಕೊಟ್ಟು ಕೋಟಿ-ಕೋಟಿ ಮೌಲ್ಯದ ಆಭರಣ ಖರೀದಿಸಿದ್ದಾಳೆ. ಶ್ವೇತಾ ಪೊಲೀಸರಿಗೆ ಸಿಕ್ಕಿಬಿದ್ದ ಬಳಿಕ ವರ್ತೂರು ಪ್ರಕಾಶ್ ಅವರು ತಮ್ಮಲ್ಲಿದ್ದ 12 ಲಕ್ಷ ನಗದು, 3 ಬ್ರೇಸ್ಲೆಟ್, ಒಂದು ಚಿನ್ನದ ಉಂಗುರವನ್ನು ಪೊಲೀಸರಿಗೆ ವಾಪಸ್ ಕೊಟ್ಟಿದ್ದಾರೆ.
ಇದೀಗ 90ರ ದಶಕದ ಅನಂತ್ ನಾಗ್ ಹಾಗೂ ಮಾಸ್ಟರ್ ಆನಂದ್ ಅಭಿನಯದ ಗೌರಿ-ಗಣೇಶ ಸಿನಿಮಾ ಮಾದರಿಯಲ್ಲೇ ಶ್ವೇತಾಗೌಡ ತನ್ನ ಮಗುವನ್ನು ಬಳಸಿಕೊಂಡು ಹಳೆಯ ಸ್ನೇಹಿತರಿಗೆ ವಂಚಿಸಿರೋದು ಬೆಳಕಿಗೆ ಬಂದಿದೆ. ತನ್ನ ಪುತ್ರನನ್ನು ಲಿವಿಂಗ್ ಟುಗೆದರ್ನಲ್ಲಿದ್ದ ಸ್ನೇಹಿತರಿಗೆ ನಿಮ್ಮದೇ ಮಗುವೆಂದು ಹೇಳಿ ನಂಬಿಸಿದ್ದಳು. ಆ ಮೂವರು ಗೆಳೆಯರಿಗೆ ಮಗುವಿನ ವಿಷಯ ಪರಸ್ಪರ ಗೊತ್ತಾಗದಂತೆ ಶ್ವೇತಾಗೌಡ ಎಚ್ಚರಿಕೆ ವಹಿಸಿದ್ದಳು. ಮಗನ ನಿರ್ವಹಣೆಗೆ ಪ್ರತಿ ತಿಂಗಳು ಮೂವರಿಂದಲೂ ಹಣ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದಳು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಶ್ವೇತಾಗೌಡ ಕೆಲ ವರ್ಷಗಳ ಕಾಲ ಪ್ರತ್ಯೇಕವಾಗಿ ಮೂವರು ಗೆಳೆಯರೊಂದಿಗೆ ಲಿವಿಂಗ್ ಟುಗೆದರ್ನಲ್ಲಿದ್ದಳು. ಬಳಿಕ ವೈಯಕ್ತಿಕ ಕಾರಣ ನೀಡಿ ಒಬ್ಬೊಬ್ಬರಿಂದಲೂ ದೂರ ಆಗಿದ್ದಳು. ನಿಮ್ಮ ಜೊತೆ ವಾಸವಾಗಿದ್ದಾಗ ಗರ್ಭ ಧರಿಸಿ ಮಗುವಾಗಿದೆ ಎಂದು ಸ್ನೇಹಿತರಿಗೆ ಕಥೆ ಕಟ್ಟಿದ್ದಳು. ಈ ವಿಷಯ ತಿಳಿದು ಸಂತೋಷಪಟ್ಟ ಗೆಳೆಯರು ಆರ್ಥಿಕವಾಗಿಯೂ ಚೆನ್ನಾಗಿದ್ದ ಅವರು ತಮ್ಮ ಮಗನನ್ನು ಸಾಕಲು ಪ್ರತಿ ತಿಂಗಳು ಹಣ ನೀಡುತ್ತಿದ್ದರು. ವಾರಾಂತ್ಯ ಹಾಗೂ ಆಗಾಗ ಮಗುವನ್ನು ನೋಡಲು ಹೋಗುತ್ತಿದ್ದಳು.
ಶ್ವೇತಾಗೌಡ ತನ್ನ ಐಷಾರಾಮಿ ಜೀವನಕ್ಕಾಗಿ ಗೌರಿ-ಗಣೇಶ ಸಿನಿಮಾ ಸ್ಟೈಲ್ನಲ್ಲಿ ತನ್ನ ಮೂವರು ಮಾಜಿ ಗೆಳೆಯರಿಗೆ ವಂಚಿಸಿರೋ ರಹಸ್ಯ ಜಗಜ್ಜಾಹೀರಾಗಿದೆ. ಇನ್ನು ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು ಇನ್ನು ಯಾರ್ಯಾರಿಗೆ ಸುಂದರಿ ತನ್ನ ಖೆಡ್ಡಾಗೆ ಬೀಳಿಸಿದ್ದಾಳೆ ಅನ್ನೋದ್ರ ಜಾಡು ಹಿಡಿದಿದ್ದಾರೆ.
ಇದನ್ನೂ ಓದಿ : ಹಣ ವಸೂಲಿ, ಬೆದರಿಕೆ ಪ್ರಕರಣ – ಶಾಸಕ ಮುನಿರತ್ನ ವಿರುದ್ಧ ಪ್ರಾಸಿಕ್ಯೂಷನ್ಗೆ SIT ತಂಡ ಮನವಿ..!