ಮಂಡ್ಯ : ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ಉಂಟಾಗಿ, ನಲುಗಿ ಹೋಗಿರುವ ನಾಗಮಂಗಲದಲ್ಲಿ ಪ್ರಸ್ತುತದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪ್ರಕರಣ ಸಂಬಂಧ ಈವರೆಗೂ 54 ಮಂದಿಯನ್ನು ಬಂಧಿಸಲಾಗಿದೆ. ನಾಗಮಂಗಲದ ನೆಮ್ಮದಿ ಕೆಡಿಸಿದ 150 ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆವರೆಗೂ ನಿಷೇಧಾಜ್ಞೆ (144 ಸೆಕ್ಷನ್) ಮುಂದುವರೆಸಿದೆ.
ಇಂದು ನಾಗಮಂಗಲಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ : ನಾಗಮಂಗಲ ಪಟ್ಟಣ ಉದ್ವಿಗ್ನ ಹಿನ್ನೆಲೆ ನಿನ್ನೆ ಬಿಜೆಪಿ ನಿಯೋಗ ಭೇಟಿ ನೀಡಿತ್ತು. ಇವತ್ತು ಮಂಡ್ಯ ಜಿಲ್ಲಾ ಸಂಸದ, ಕೇಂದ್ರ ಸಚಿವ ಕುಮಾರಸ್ವಾಮಿ ನಾಗಮಂಗಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಕೆಲ ಹೊತ್ತಿನಲ್ಲೇ ನಾಗಮಂಗಲಕ್ಕೆ ಹೆಚ್ಡಿಕೆ ತೆರಳಿ ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಗಲಭೆ ನಡೆದ ದರ್ಗಾ ರಸ್ತೆ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ, ಅಂಗಡಿ, ವಾಹನ ಕಳೆದುಕೊಂಡ ಸಂತ್ರಸ್ತರ ಜೊತೆ ಕೇಂದ್ರ ಸಚಿವರು ಮಾತುಕತೆ ನಡೆಸಲಿದ್ದಾರೆ. ಪೊಲೀಸರು, ಸ್ಥಳೀಯ ಮುಖಂಡರಿಂದಲೂ ಹೆಚ್ಡಿಕೆ ಮಾಹಿತಿ ಪಡೆಯಲಿದ್ದಾರೆ. ನಿನ್ನೆ ನಾಗಮಂಗಲ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದ ಹೆಚ್ಡಿಕೆ, ಸರ್ಕಾರ ಒಂದು ವರ್ಗವನ್ನು ಓಲೈಸುವುದನ್ನು ಬಿಡಲಿ ಎಂದು ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ : ನಾಗಮಂಗಲ ಇನ್ನೂ ಬೂದಿ ಮುಚ್ಚಿದ ಕೆಂಡ – ನಾಳೆವರೆಗೂ ನಿಷೇಧಾಜ್ಞೆ ಮುಂದುವರೆಸಿದ ಜಿಲ್ಲಾಡಳಿತ..!