ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್‍ಕುಮಾರ್ ಅವರು ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ “ಭೈರತಿ ರಣಗಲ್” ಚಿತ್ರದ ಶೀರ್ಷಿಕೆ ಗೀತೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಕಿನ್ನಾಳ್ ರಾಜ್ ಅವರು ಬರೆದಿರುವ “ಇತಿಹಾಸವೇ ನಿಬ್ಬೆರಿಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು” ಎಂಬ ಭೈರತಿ ರಣಗಲ್ ಸಿನಿಮಾದ ಶೀರ್ಷಿಕೆ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ ಹಾಡಿದ್ದಾರೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಿಣೆಯಾಗುತ್ತಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ನರ್ತನ್ ಹಾಗೂ ಶಿವಣ್ಣ ಅವರ ಕಾಂಬಿನೇಶನ್ ನಲ್ಲಿ ಬಂದಿದ್ದ “ಮಫ್ತಿ” ಚಿತ್ರದ ಪ್ರೀಕ್ವೆಲ್ ಆಗಿರುವ “ಭೈರತಿ ರಣಗಲ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡಿನ ಮೂಲಕ ಜನಪ್ರಿಯವಾಗಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ.
ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಆಕಾಶ್ ಹಿರೇಮಠ ಸಂಕಲನ, ಗುಣ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ “ಭೈರತಿ ರಣಗಲ್” ಚಿತ್ರಕ್ಕಿದೆ.
ಇದನ್ನೂ ಓದಿ : ವಿನಯ್ ರಾಜ್ಕುಮಾರ್ ‘ಪೆಪೆ’ ಸಿನಿಮಾ ವಿತರಣೆ ಮಾಡಲಿದೆ ಕೆಆರ್‌ಜಿ ಸ್ಟುಡಿಯೋಸ್..!