ಬೆಂಗಳೂರು : ನಾಗಮಂಗಲ ಗಲಭೆ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ಸೋಮವಾರ ಬೆಂಗಳೂರು ನಗರದಲ್ಲಿ ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಪಾಲಿಸಬೇಕಾದ ಕೆಲ ಸೂಚನೆಗಳನ್ನು ಪೊಲೀಸರು ಹೊರಡಿಸಿದ್ದಾರೆ.
ಈಗಾಗಲೇ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಸಭೆ ನಡೆಸಿದ್ದಾರೆ. ಇದರೊಂದಿಗೆ ಹಬ್ಬದ ಮೆರವಣಿಗೆಯಲ್ಲಿ ಎಲ್ಲೂ ಡಿಜೆ ಸೌಂಡ್ ಹಾಕದಂತೆ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಹರಿತವಾದ ಆಯುಧ ತರುವಂತಿಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ ಖಡಕ್ ಸೂಚನೆ ನೀಡಿದ್ದಾರೆ.
ಇನ್ನು ಈದ್‌ಮಿಲಾದ್ ಹಬ್ಬದ ದಿನದಂದು ನಗರದಲ್ಲಿ ಮುಸ್ಲಿಮರು ಮೆರವಣಿಗೆ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಜೆಸಿನಗರ, ಶಿವಾಜಿನಗರ, ಯಲಹಂಕ ಓಲ್ಡ್ ಟೌನ್, ಬೆಳ್ಳಳ್ಳಿ ಕ್ರಾಸ್ ,ರಾಜಗೋಪಾಲನಗರ, ಪೀಣ್ಯ, ಸೌತ್ ಎಂಡ್ ಸರ್ಕಲ್, ಆರ್.ವಿ ರಸ್ತೆ, ಲಾಲ್ಬಾಗ್ ವೆಸ್ಟ್ ಗೇಟ್, ಗೀತಾ ಜಂಕ್ಷನ್, ಬೇಂದ್ರೆ ಜಂಕ್ಷನ್, ಓಬಳಪ್ಪ ಗಾರ್ಡನ್ ಜಂಕ್ಷನ್, ಮಹಾಲಿಂಗೇಶ್ವರ ಲೇಔಟ್, ಆಡುಗೋಡಿ ಮೆರವಣಿಗೆಗೆ ಟೈಟ್ ಸೆಕ್ಯೂರಿಟಿ ಹಾಗೂ ಈ ಮಾರ್ಗಗಳಲ್ಲಿ ಸಂಚಾರ ಬದಲಾವಣೆ, ಭದ್ರತೆ ಹೆಚ್ಚಳಕ್ಕೆ ಕಮಿಷನರ್ ಬಿ.ದಯಾನಂದ್ ಸೂಚನೆ ನೀಡಿದ್ದಾರೆ.
ಸೂಚನೆಗಳು :
- ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೆ ಹರಿತವಾದ ವಸ್ತುಗಳನ್ನು ಹೊಂದಿರಬಾರದು.
- ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸಬಾರದು.
- ಸ್ತಬ್ದ ಚಿತ್ರಗಳು ಯಾವುದೇ ಪ್ರಚೋದನಾತ್ಮಕ ಅಂಶಗಳನ್ನು ಒಳಗೊಂಡಿರಬಾರದು.
- ಯಾವುದೇ ಪೂಜಾ ಸ್ಥಳಗಳ (ದೇವಸ್ಥಾನ/ಚರ್ಚಗಳ) ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು.
- ಮೆರವಣಿಗೆಯ ವೇಳೆ ಆಯೋಜಕರು ವಿದ್ಯುತ್ (ಕೆ.ಇ.ಬಿ) ಇಲಾಖೆಯಿಂದ ಸಿಬ್ಬಂದಿಯವರನ್ನು ನೇಮಿಸಿಕೊಂಡು ಯಾವುದೇ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
- ಮೆರವಣಿಗೆಯ ಸಂದರ್ಭದಲ್ಲಿ ಆಯೋಜಕರು ಬೆಂಕಿನಿಂದಿಸುವ ಸಾಮಗ್ರಿಯನ್ನು ಇಟ್ಟುಕೊಳ್ಳಬೇಕು.
- ರಾತ್ರಿ ಮೆರವಣಿಗೆ ಮುಗಿದ ನಂತರ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚಾಗಿ ದ್ವಿ-ಚಕ್ರ ವಾಹನವನ್ನು ಚಲಿಸಬಾರದು.
- ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಮೈಕ್ ಬಳಕೆಗೆ ಅವಕಾಶ
- ಧ್ವನಿವರ್ಧಕಗಳನ್ನು ಬಳಸಲು ಸ್ಥಳೀಯ ಪೊಲೀಸರ ಅನುಮತಿ/ಪರವಾನಗೆ ಪಡೆದುಕೊಳ್ಳಬೇಕು
ಇದನ್ನೂ ಓದಿ : ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಹೈಡ್ರಾಮಾ – ಗಣೇಶ ಮೂರ್ತಿ ಸಮೇತ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ..!