ಬಿಗ್ ಬಾಸ್’ ಬೆಡಗಿ ತನಿಷಾ ಕುಪ್ಪಂಡ ದೊಡ್ಮನೆ ಆಟ ಮುಗಿದ ಮೇಲೆ ನಟನೆ, ಉದ್ಯಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತನಿಷಾ ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ತುಂಬಾ ಫೇಮಸ್ ಆಗಿದ್ದಾರೆ. ಸೀರಿಯಲ್‌ಗಳಲ್ಲಿ ನಟಿಸಿ ಮನೆಮಾತಾಗಿರುವ ನಟಿ, ಇದೀಗ ತಮ್ಮ ಮುಂಬರುವ ಪೆನ್ಡ್ರೈವ್ ಸಿನಿಮಾದ ತಯಾರಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಅವರನ್ನು ಈ ಪಾತ್ರದಲ್ಲಿ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
ತನಿಷಾ ಸಿನಿ ಲೋಕದಲ್ಲಿ ಎಷ್ಟೇ ಕಲರ್ಫುಲ್ ಆಗಿದ್ದರೂ ಸಹ, ಪ್ರೀತಿ ವಿಚಾರದಲ್ಲಿ ಬಹಳಷ್ಟು ನೋವು ಅನುಭವಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಒಂದು ಕಾಲದಲ್ಲಿ ಪ್ರೀತಿಗಾಗಿ ನೆಚ್ಚಿನ ನಟನೆಯನ್ನೇ ತನಿಷಾ ತ್ಯಜಿಸಿದ್ದರು. ಹೌದು, ಈ ವಿಚಾರದ ಬಗ್ಗೆ ಖಾಸಗಿ ಯೂಟ್ಯೂಬ್ ಚಾನೆಲ್ʼನಲ್ಲಿ ಮುಕ್ತವಾಗಿ ನಟಿ ಮಾತನಾಡಿದ್ದಾರೆ.
ತನಿಷಾ ಒಬ್ಬರನ್ನು ಪ್ರೀತಿಸಿದ್ದರು. ಅವರನ್ನೇ ಮದುವೆಯಾಗುವ ಪ್ಲಾನ್ ಕೂಡ ಮಾಡಿದ್ದರು. ಆದರೆ ಆತ ‘ನಿನಗೆ ನಾನು ಮುಖ್ಯನಾ? ಧಾರಾವಾಹಿ ಮುಖ್ಯನಾ?’ ಎಂದು ಪ್ರಶ್ನೆಯಿಟ್ಟಿದ್ದ. ಕೊನೆಗೆ ಆತನಿಗಾಗಿ ನಟನೆಯನ್ನೇ ತನಿಷಾ ಬಿಟ್ಟರು. ಆದರೆ ನಟನೆ ಬಿಟ್ಟ ಮೇಲೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಅನುಮಾನದ ಸ್ವಭಾವದಿಂದ ತನಿಷಾ ಯಾರ ಜೊತೆ ಮಾತನಾಡುವಂತಿರಲಿಲ್ಲ. ಆನ್ʼಸ್ಕ್ರೀನ್ʼನಲ್ಲಿ ಯಾರೊಬ್ಬ ನಟನ ಜೊತೆಯೂ ಹತ್ತಿರವಾಗಿ ಮಾತನಾಡುವುದನ್ನು ಕಂಡರೂ ಆತ ಜಗಳ ಮಾಡುತ್ತಿದ್ದನಂತೆ.
ಇದೇ ಕಾರಣಕ್ಕೆ ಅದೆಷ್ಟೋ ನಟನೆಯ ಛಾನ್ಸ್ ಕೂಡ ತನಿಷಾ ಬಿಟ್ಟಿದ್ದರು. ಅವನೇ ಸರ್ವಸ್ವ ಎಂದುಕೊಂಡಿದ್ದ ತನಿಷಾರಿಗೆ ಕೊನೆಗೂ ಈ ಸಂಬಂಧ ಉಳಿಸಿಕೊಳ್ಳಲು ಆಗಲೇ ಇಲ್ಲ. ಒಂದು ಹಂತದವರೆಗೆ ಸಹಿಸಿಕೊಂಡ ತನಿಷಾ ಕೊನೆಗೆ ಬ್ರೇಕಪ್ ಮಾಡಿಕೊಂಡರು. ಈ ಬಗ್ಗೆ ಮಾತನಾಡುತ್ತಾ ಇತರ ಯುವತಿಯರಿಗೂ ನಟಿ ಕಿವಿ ಮಾತನ್ನು ಹೇಳಿದ್ದಾರೆ.
“ನೀವು ಮದುವೆಯಾಗುವ ಹುಡುಗ, ನಿಮಗಿಂತಲೂ ಹೆಚ್ಚು ನಿಮ್ಮನ್ನು ಪ್ರೀತಿಸುವಂತಿರಬೇಕು. ಆ ರೀತಿ ಇಷ್ಟಪಡುವ ಕ್ಯಾರೆಕ್ಟರ್ ನಿಮ್ಮ ಹುಡುಗನಿಗೆ ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಬಿಟ್ಟುಬಿಡಿ. ಇಲ್ಲದಿದ್ದರೆ ತುಂಬಾ ಕಷ್ಟಪಡಬೇಕಾಗುತ್ತದೆ. ಬೇರೊಬ್ಬನ್ನ ಹುಡುಕಿ. ಎಲ್ಲಕ್ಕಿಂತಲೂ ಮುಖ್ಯ ನಿಮ್ಮ ಜೀವನ” ಎಂದು ನಟಿ ತನಿಷಾ ಮಾತನಾಡಿದ್ದಾರೆ.
ಇದನ್ನೂ ಓದಿ : ಕಿರಿಕ್ ಪಾರ್ಟಿಯ ಆ ಒಂದು ಪಾತ್ರದ ಸೀಕ್ರೆಟ್ ಬಿಚ್ಚಿಟ್ಟ ರಿಷಬ್ ಶೆಟ್ಟಿ..!