ಬಿಗ್ ಬಾಸ್ ಮೂಲಕ ಫೇಮಸ್ ಆಗಿರುವ ತನಿಷಾ ಕುಪ್ಪಂಡ ಸದ್ಯ ಉದ್ಯಮದ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ತನಿಷಾ ಇಷ್ಟಪಟ್ಟು ತೆಗೆದುಕೊಂಡ ಕಾರಿನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ನಾನು ಒಂದು ಕಾರು ತೆಗೆದುಕೊಳ್ಳಲು 11 ವರ್ಷ ದುಡಿದಿದ್ದೇನೆ. ಅದು ಯಾರಪ್ಪನ ದುಡ್ಡು ಅಲ್ಲ. ಅದರ ಹೊರತಾಗಿಯೂ ಕಾರಿನ ಖರೀದಿ ಬಗ್ಗೆ ತುಂಬಾ ದೊಡ್ಡ ಕಥೆಯೇ ನಡೆದೋಯ್ತು ಎಂದಿದ್ದಾರೆ. ಸ್ನೇಹಿತ ಎಂದು ಹೇಳಿಕೊಂಡವನು ತಮಗೆ ಮಾಡಿದ ಅನ್ಯಾಯದ ಬಗ್ಗೆ ನಟಿ ನೋವು ತೋಡಿಕೊಂಡಿದ್ದಾರೆ.
ನಾನು ಕಾರು ತೆಗೆದುಕೊಳ್ಳುವ ಯೋಚನೆ ಮಾಡಿದೆ ಎಂಬುದು ನನ್ನ ಸೋ ಕಾಲ್ಡ್ ಸ್ನೇಹಿತನಿಗೆ ಗೊತ್ತಾಯ್ತು. ಹಣವನ್ನು ಆಮೇಲೆ EMI ಮೂಲಕ ಕೊಡು, ಈಗ ನಾನು ದುಡ್ಡು ಕೊಟ್ಟಿರುತ್ತೇನೆ ಎಂದ. ನಾನೂ ಒಪ್ಪಿದೆ. ಸಾಮಾನ್ಯವಾಗಿ ಆಭರಣಗಳನ್ನು ಇದೇ ರೀತಿ ತೆಗೆದುಕೊಳ್ಳುವುದು. ಅದಕ್ಕಾಗಿಯೇ ಇದನ್ನು ಒಪ್ಪಿಕೊಂಡುಬಿಟ್ಟೆ. ಆದರೆ ಆಮೇಲೆ ಆದದ್ದೇ ಬೇರೆ. ಅವನು ಮೊದಲು ನನ್ನ ಕಂಪೆನಿಯ ಹೆಸರಿನಲ್ಲಿ ತೆಗೆದುಕೋ ಎಂದ. ಅದನ್ನು ಒಪ್ಪಿಕೊಂಡಿದ್ದೆ. ಆದರೆ ಆತ ಮೇಲಿಂದ ಮೇಲೆ ಪ್ರತಿದಿನ ಕಾಲ್ ಮಾಡೋಕೆ ಶುರು ಮಾಡಿದ. ಅವನ ಉದ್ದೇಶ ತಿಳಿದಿರಲಿಲ್ಲ.
ಆದರೆ ಅದೊಮ್ಮೆ ನಾನು ತುಂಬಾ ಬ್ಯುಸಿಯಾಗಿ ಒಂದು ವಾರ ಕಾಲ್ ಮಾಡಲಿಲ್ಲ. ಆಮೇಲೆ ಅವನೇ ಕಾಲ್ ಮಾಡಿ ಯಾಕೆ ಕಾಲ್ ಮಾಡ್ತಾ ಇಲ್ಲ ಎಂದು ಬೇರೆಯದ್ದೇ ರೀತಿಯಲ್ಲಿ ಕೇಳಿದ. ನನಗೆ ಶಾಕ್ ಆಯ್ತು. ಇಬ್ಬರ ನಡುವೆ ಜೋರಾದ ಗಲಾಟೆನೇ ನಡೆಯಿತು. ಕೊನೆಗೆ ಜಗಳ ಯಾವ ಮಟ್ಟಿಗೆ ಹೋಯ್ತು ಎಂದರೆ, ಇವತ್ತೇ ಅಷ್ಟೂ ದುಡ್ಡು ಬೇಕು ಎಂದು ಕೇಳಿದ. 16 ಲಕ್ಷ ರೂಪಾಯಿ ಕಾರು. ನಾನು ಆಗಲೇ ಮೂರೂವರೆ ಲಕ್ಷ ರೂಪಾಯಿ ಕೊಟ್ಟಾಗಿತ್ತು. ನನಗೆ ಒಂದೇ ಬಾರಿಗೆ ಅಷ್ಟೂ ದುಡ್ಡು ಕೊಡಲು ಆಗಲ್ಲ ಎಂದೆ. ಇದಾದ ಸ್ವಲ್ಪ ದಿನದಲ್ಲಿಯೇ ಯಲಹಂಕ ಪೊಲೀಸ್ ಸ್ಟೇಷನ್ನಿಂದ ಕಾಲ್ ಬಂತು. ಕಾರು ನಿಮ್ಮ ಹೆಸರಿನಲ್ಲಿ ಇಲ್ಲ, ಆದ್ದರಿಂದ ಈಗಲೇ ಕಾರನ್ನು ಪೊಲೀಸ್ ಸ್ಟೇಷನ್ಗೆ ತನ್ನಿ ಎಂದರು.
ಅಂದು ನಾನು ಪ್ಯಾಲೇಸ್ ಗ್ರೌಂಡ್ನಲ್ಲಿ ಆ್ಯಂಕರಿಂಗ್ ಹೋಗ್ತಾ ಇದ್ದೆ. ಪೊಲೀಸರಿಗೆ ಈ ಬಗ್ಗೆ ಹೇಳಿ, ಕಾರನ್ನು ಅಲ್ಲಿಂದಲೇ ತೆಗೆದುಕೊಂಡು ಹೋಗಿ ಎಂದೆ. ನನಗೆ ಜೋರಾಗಿ ಅಳು ಬರುತ್ತಿತ್ತು. ಆದರೆ ಆ್ಯಂಕರಿಂಗ್ ಇತ್ತು. ಏನು ಮಾಡಬೇಕು ಗೊತ್ತಾಗಲಿಲ್ಲ. ಆಮೇಲೆ ನನ್ನನ್ನು ಅಲ್ಲಿದ್ದ ನನ್ನ ಪರಿಚಯದವರಾದ ಜಿಗ್ನೇಶ್ ಅವರು ಏನಾಯ್ತು ಎಂದು ಕೇಳಿದರು. ಎಲ್ಲಾ ಅವರಿಗೆ ವಿಷಯ ತಿಳಿಸಿದೆ. ಅವರು ಮುಂದಾಗಿದ್ದರಿಂದ ಸಮಸ್ಯೆ ಅಂತೂ ಬಗೆಹರಿಯಿತು ಎಂದು ಕಾರಿನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಿದ ಬಿಜೆಪಿ ನಿಯೋಗ..!