ನವದೆಹಲಿ : ಸದ್ಗುರು ಜಗ್ಗಿ ವಾಸುದೇವ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ ಆಶ್ರಮದಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಬಲವಂತವಾಗಿ ಬಂಧನದಲ್ಲಿ ಇಟ್ಟಕೊಳ್ಳಲಾಗಿದೆ ಎನ್ನುವ ಕುರಿತು ಜಗ್ಗಿ ವಾಸುದೇವ್ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ತಮ್ಮ ಇಬ್ಬರು ಹೆಣ್ಣು ಮಕ್ಕಳ ತಲೆಕೆಡಿಸಿ ಬಲವಂತವಾಗಿ ಬಂಧಿಸಿ ಆಶ್ರಮದಲ್ಲಿ ಇರಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಅಡಿಯಲ್ಲಿ ನಡೆಯುತ್ತಿದ್ದ ಎಲ್ಲ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ಸುಪ್ರೀಂ ಕೋರ್ಟ್ ಹೆಣ್ಣು ಮಕ್ಕಳ ಜೊತೆ ಮಾತನಾಡಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು. ಅವರು ಈಶಾ ಫೌಂಡೇಷನ್‌ನಲ್ಲಿನ ತಮ್ಮ ಸ್ವ ಇಚ್ಚೆಯಿಂದ ವಾಸವಾಗಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಇನ್ನು ಆಶ್ರಮದಲ್ಲಿ ಯಾರನ್ನೂ ಅಕ್ರಮವಾಗಿ ಇರಿಸಿಲ್ಲ ಎಂದು ಅಲ್ಲಿನ ನಿವಾಸಿಗಳೇ ಹೇಳಿಕೆ ನೀಡಿದ್ದರು. ಹಾಗಾಗಿ ಅಕ್ರಮವಾಗಿ ಇರಿಸಿರುವ ಬಗ್ಗೆ ಪೂರಕ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಪ್ರಕರಣ ವಜಾಗೊಳಿಸಲಾಗಿದೆ ಎಂದು ಸುಪ್ರೀಂ ತನ್ನ ಆದೇಶದಲ್ಲಿ ತಿಳಿಸಿದೆ.
ಏನಿದು ಪ್ರಕರಣ? ತಮಿಳುನಾಡಿನ ನಿವೃತ್ತ ಪ್ರೊಫೆಸರ್ ಒಬ್ಬರು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಇಶಾ ಯೋಗ ಸೆಂಟರ್‌ನಲ್ಲಿ ಬಲವಂತವಾಗಿ ಬಂಧನದಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಈ ಪ್ರಕರಣದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶಿಸಿತ್ತು. ಇದಾದ ಮೇಲೆ ಕೊಯಮತ್ತೂರು ಪೊಲೀಸರು ಆಶ್ರಮದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಮದ್ರಾಸ್ ಹೈಕೋರ್ಟ್‌ನ ಈ ಆದೇಶ ಮತ್ತು ಪೊಲೀಸರ ಕ್ರಮದ ವಿರುದ್ಧ ಇಶಾ ಫೌಂಡೇಶನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಕೊಯಮತ್ತೂರಿನ ಆಶ್ರಮದಲ್ಲಿದ್ದ ಇಬ್ಬರು ಮಹಿಳೆಯರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸುಪ್ರೀಂಕೋರ್ಟ್ ಮುಂದೆ ತಮ್ಮ ಹೇಳಿಕೆ ನೀಡಿದ್ದರು. ನಾವು ಸ್ವಇಚ್ಛೆಯಿಂದ ಆಶ್ರಮದಲ್ಲಿ ಇದ್ದೇವೆ. ತಮ್ಮನ್ನೂ ಯಾರು ಬಲವಂತವಾಗಿ ಬಂಧಿಸಿಲ್ಲ ಎಂದು ಹೆಣ್ಣು ಮಕ್ಕಳ ಹೇಳಿಕೆ ನೀಡಿದ್ದರು. ಸುಪ್ರೀಂಕೋರ್ಟ್ ಆಶ್ರಮದಲ್ಲಿರುವ ಮಹಿಳೆಯರ ಹೇಳಿಕೆಯನ್ನು ಪರಿಗಣಿಸಿ ಇದೀಗ ಮದ್ರಾಸ್ ಹೈಕೋರ್ಟ್‌ನ ಹೇಬಿಯಸ್ ಕಾರ್ಪಸ್ ಪ್ರಕ್ರಿಯೆಯನ್ನು ರದ್ದುಗೊಳಿಸಿ ಮಹತ್ವದ ಆದೇಶ ನೀಡಿದೆ.
ಇದನ್ನೂ ಓದಿ : ಸಿಎಂ ಸಿದ್ದುಗೆ ಹೆಚ್ಚಿದ ಮುಡಾ ಟೆನ್ಷನ್ – ಇಂದೂ ಕೂಡ ಮುಡಾ ಕಚೇರಿಯಲ್ಲಿ ED ಶೋಧ ಮುಂದುವರಿಕೆ..!