ನವದೆಹಲಿ : ಸುಪ್ರೀಂ ಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸಂಜೀವ್ ಖನ್ನಾ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ನ್ಯಾ.ಸಂಜೀವ್ ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿದ ತೀರ್ಪು, ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕ್ರಮವನ್ನು ಎತ್ತಿಹಿಡಿದ ತೀರ್ಪು ಸೇರಿದಂತೆ ಸುಪ್ರೀಂ ಕೋರ್ಟ್ ನೀಡಿದ ಹಲವು ಮಹತ್ವದ ತೀರ್ಪುಗಳಲ್ಲಿ ಖನ್ನಾ ಅವರ ಪಾಲು ಕೂಡ ಇದೆ. ನ್ಯಾ.ಸಂಜೀವ್ ಖನ್ನಾ ಅವರ ಹೆಸರನ್ನು ನ್ಯಾ.ಡಿ.ವೈ ಚಂದ್ರಚೂಡ್ ಅವರು ಶಿಫಾರಸು ಮಾಡಿದ್ದರು. ಇವರು ಮುಂದಿನ ವರ್ಷ ಮೇ 13 ರವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇನ್ನು ಪ್ರಮಾಣವಚನ ಸ್ವೀಕಾರದ ವೇಳೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಉಪಸ್ಥಿತರಿದ್ದರು.
1960 ಮೇ 14ರಂದು ಜನಿಸಿದ ಸಂಜೀವ್ ಖನ್ನಾ ಅವರು, ದಿಲ್ಲಿಯ ಕಾನೂನು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದಿದ್ದಾರೆ. 2005ರಲ್ಲಿ ಅವರು ದಿಲ್ಲಿ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದರು. ಅನಂತರ 2006ರಲ್ಲಿ ಅದೇ ಉಚ್ಚ ನ್ಯಾಯಾಲಯದ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2019 ಜನವರಿ 18ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು.
ಸಂಜೀವ್ ಖನ್ನಾ ಖನ್ನಾ ಅವರು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ದೇವರಾಜ್ ಖನ್ನಾ ಅವರ ಮಗ. ಅಷ್ಟೇ ಅಲ್ಲ, ದೇಶದ ಗಮನ ಸೆಳೆದ 1973ರ ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರ ಸಂಬಂಧಿ ಕೂಡ ಹೌದು.
Post Views: 41