ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ವೆಟ್ಟೈಯನ್’. ಜೈ ಭೀಮ್ ಖ್ಯಾತಿಯ ಟಿ.ಜೆ.ಜ್ಞಾನವೇಲ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 10ಕ್ಕೆ ಬೆಳ್ಳಿಪರದೆಗೆ ವೆಟ್ಟೈಯನ್ ಸಿನಿಮಾ ಲಗ್ಗೆ ಇಡುತ್ತಿದೆ.
ವೆಟ್ಟೈಯನ್ ಬಹಳಷ್ಟು ನಿರೀಕ್ಷೆ ಹುಟ್ಟಿಸಲು ನಾನಾ ಕಾರಣಗಳಿವೆ. ಇದು ರಜನಿ 170ನೇ ಚಿತ್ರವಾಗಿದೆ. ಇದರಲ್ಲಿ ತಲೈವರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ವೆಟ್ಟೈಯನ್’ ಸಿನಿಮಾದಲ್ಲಿ ಬಹುತಾರಾಗಣವಿದೆ. ಬಹಳ ದಿನಗಳ ನಂತರ ರಜನಿಕಾಂತ್ ಅವರ ಜೊತೆಗೆ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಶರಾ ವಿಜಯನ್, ರಕ್ಷನ್, ಜಿ ಎಂ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
‘ಕೂಟಥಿಲ್ ಒರುವನ್’, ‘ಜೈ ಭೀಮ್’ ನಂತರ ಟಿ ಜೆ ಜ್ಞಾನವೇಲ್ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. 2.0, ದರ್ಬಾರ್ ನಂತರ ರಜನಿಕಾಂತ್ ಜೊತೆಗೆ ಮೂರನೇ ಬಾರಿಗೆ ಲೈಕಾ ಪ್ರೊಡಕ್ಷನ್ಸ್ ಕೈಜೋಡಿಸಿದೆ. ‘ವೆಟ್ಟೈಯನ್’ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ವೆಟ್ಟೈಯನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ವೆಟ್ಟೈಯನ್ ಸಿನಿಮಾ ನಿರ್ಮಿಸುತ್ತಿದೆ. ಅಕ್ಟೋಬರ್ 10ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕ ಸುಭಾಸ್ಕರನ್ ಸಜ್ಜಾಗಿದ್ದಾರೆ.
ಇದನ್ನೂ ಓದಿ : ಸದ್ಯದಲ್ಲೇ ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ ‘ಫಾರೆಸ್ಟ್’ ಚಿತ್ರದ ಟ್ರೈಲರ್ ರಿಲೀಸ್..!