ಸೂಪರ್‌ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ದಿಢೀರನೇ ಏರುಪೇರಾಗಿದ್ದು, ನಿನ್ನೆ ಮಧ್ಯರಾತ್ರಿ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ.
73 ವರ್ಷದ ನಟ ರಜನಿಕಾಂತ್ ದಿಢೀರನೇ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು ಅಭಿಮಾನಿಗಳಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ವೈದ್ಯರು ರಜನಿಯ ಆರೋಗ್ಯದ ಬಗ್ಗೆ ಇನ್ನೂ ಮಾಹಿತಿಯನ್ನು ನೀಡಿಲ್ಲ. ಆದರೆ, ನಿನ್ನೆ ಮಧ್ಯರಾತ್ರಿ ರಜನಿಕಾಂತ್‌ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬಳಿಕ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಹಲವು ಪರೀಕ್ಷೆ ಒಳಪಡಿಸಲಾಯಿತು ಎಂದು ತಿಳಿದು ಬಂದಿದೆ. ಹೃದಯರೋಗ ತಜ್ಞ ಡಾ.ಸಾಯಿ ಸತೀಶ್ ಚಿಕಿತ್ಸೆ ನೀಡಿದ್ದು, ಕಳೆದ ರಾತ್ರಿಯಿಂದ ರಜಿನಿಕಾಂತ್ ಅವರು ವೈದ್ಯರ ನಿಗಾದಲ್ಲಿದ್ದಾರೆ. ಸದ್ಯ ಸೂಪರ್‌ಸ್ಟಾರ್ ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ನಿನ್ನೆ ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಸದ್ಯ ಸೂಪರ್‌ಸ್ಟಾರ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು, ವೈದ್ಯರು ಇಂದು ರಜನಿ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ. “ವೆಟ್ಟೆಯಾನ್” ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಹೊತ್ತಲ್ಲೇ ತಲೈವಾ ಆಸ್ಪತ್ರೆಗೆ ದಾಖಲಾಗಿದ್ದು, ಅಪೋಲೋ ಆಸ್ಪತ್ರೆಯಲ್ಲಿರುವ ರಜಿನಿ ಚೇತರಿಕೆಗೆ ಫ್ಯಾನ್ಸ್ ಪ್ರಾರ್ಥನೆ ಮಾಡುತ್ತಿದ್ದಾರೆ. ತಲೈವಾ ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುತ್ತಿದ್ದಾರೆ.
ಇದನ್ನೂ ಓದಿ : ಮುಡಾ ಕೇಸ್ : ತನಿಖೆ ಆರಂಭಿಸಿದ ಲೋಕಾಯುಕ್ತ – ಸ್ನೇಹಮಹಿ ಕೃಷ್ಣಗೆ ಮೊದಲ ನೋಟಿಸ್..!