ಕನ್ನಡದ ಜನಪ್ರಿಯ ಚಾನೆಲ್ ಸ್ಟಾರ್ ಸುವರ್ಣ ವಾಹಿನಿ ಹಲವಾರು ವೈವಿಧ್ಯಮಯ ಧಾರಾವಾಹಿಗಳು, ರಿಯಾಲಿಟಿ ಶೋಗಳು, ಅಡಿಗೆ ಶೋಗಳು ಮುಂತಾದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಇದೀಗ ‘ನಿನ್ನ ಜೊತೆ ನನ್ನ ಕಥೆ’ ಎಂಬ ಹೊಸ ಧಾರಾವಾಹಿಯ ಮೂಲಕ ವಿನೂತನ ಕಥೆಯನ್ನು ವೀಕ್ಷಕರಿಗೆ ಹೇಳಲು ಸಜ್ಜಾಗಿದೆ.
ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ. ಸಾಮಾನ್ಯವಾಗಿ ಮನಸು-ಮನಸುಗಳ ಬೆಸುಗೆಯಿಂದ ಮದುವೆಯಾಗುತ್ತದೆ. ಆದರೆ ಇದೊಂತರ ಡಿಫರೆಂಟ್ ಕಥೆ ಅಂತಾನೇ ಹೇಳಬಹುದು. ಕಥಾನಾಯಕಿ ಭೂಮಿ ಚಹಾ ಮಾರುವವಳಾಗಿದ್ದು, ಪೊಲೀಸ್ ಕಾನ್ಸ್ಟೇಬಲ್ ಆಗಬೇಕೆಂಬ ಕನಸನ್ನು ಹೊಂದಿರುತ್ತಾಳೆ. ಇನ್ನೊಂದು ಕಡೆ ಯಾರದ್ದೋ ಸಂಚಿಗೆ ಬಲಿಯಾಗಿ ಭೂಮಿಯ ತಾಯಿ ತಪ್ಪೇ ಮಾಡದಿದ್ರೂ ಜೈಲು ಸೇರಿರುತ್ತಾರೆ.
ಇನ್ನು ಈ ಕಥೆಯ ನಾಯಕ ಆದಿತ್ಯ, ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ದು ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಮದುವೆ ಅಂದ್ರೇನೆ ಇಷ್ಟವಿರದ ಆದಿಗೆ ಮನೆಯಲ್ಲಿ ಮದುವೆಯ ತಯಾರಿ ಮಾಡುತ್ತಿರುತ್ತಾರೆ. ಮುಂದೆ, ಅನಿವಾರ್ಯ ಕಾರಣಗಳಿಂದಾಗಿ ಭೂಮಿ ಹಾಗು ಆದಿ ಇಬ್ಬರು ಪರಸ್ಪರ ಷರತ್ತುಗಳಿಗೆ ಒಪ್ಪಿಕೊಂಡು ಒಂದು ವರ್ಷದ ಕಾಂಟ್ರಾಕ್ಟ್ನೊಂದಿಗೆ ಮದುವೆಯಾಗ್ತಾರೆ. ಕಾಂಟ್ರಾಕ್ಟ್ ಮದುವೆಯಿಂದ ಒಂದಾದ ಈ ಜೀವಗಳ ಮನಸುಗಳು ಮುಂದೆ ಹೇಗೆ ಒಂದಾಗುತ್ತೆ ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
ಈ ಕಥೆಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ನಟ ನಿರಂಜನ್ ವರ್ಷಗಳ ಬಳಿಕ “ನಿನ್ನ ಜೊತೆ ನನ್ನ ಕಥೆ” ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ನಾಯಕಿಯಾಗಿ ನಟಿ ನಿರುಷ ಗೌಡ ನಟಿಸುತ್ತಿದ್ದು ಕಥೆಯು ಅದ್ಬುತ ತಾರಾಬಳಗವನ್ನು ಹೊಂದಿದೆ. ಇನ್ನು “ನಿನ್ನ ಜೊತೆ ನನ್ನ ಕಥೆ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ : ಮಹಾ ಮಳೆಗೆ ಮುಂಬೈ ತತ್ತರ.. ಜನಜೀವನ ಅಸ್ತವ್ಯಸ್ತ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ..!