ಕಾನ್ಪುರ : ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ಸೆ.27ರಿಂದ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಕಾನ್ಪುರ ತಲುಪಿದ್ದು, ಟೀಂ ಇಂಡಿಯಾ ಮಂಗಳವಾರ ಕಾನ್ಪುರದ ನೆಲಕ್ಕೆ ಕಾಲಿಟ್ಟಿದೆ. ಈ ವೇಳೆ ಎಲ್ಲಾ ಆಟಗಾರರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಆ ಬಳಿಕ ತಂಡದ ಆಟಗಾರರು ಹೋಟೆಲ್‌ಗೆ ತೆರಳಿದರು.
ಟೀಂ ಇಂಡಿಯಾ ಆಟಗಾರರು ಉಳಿದುಕೊಳ್ಳುವ ಹೋಟೆಲ್‌ನಲ್ಲೂ ಸಿಬ್ಬಂದಿಗಳು ವಿರಾಟ್ ಕೊಹ್ಲಿ ಸೇರಿದಂತೆ ಇತರ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಹೋಟೆಲ್ ಸಿಬ್ಬಂದಿಗಳ ಮೇಲೆ ವಿರಾಟ್ ಕೊಹ್ಲಿ ಸ್ವಲ್ಪ ಅಸಮಾಧಾನ ಹೊರಹಾಕಿದ್ದಾರೆ.
ಹೌದು.. ವಿರಾಟ್ ಕೊಹ್ಲಿ ಹೋಟೆಲ್‌ಗೆ ಬಂದಿಳಿಯುತ್ತಿದ್ದಂತೆಯೇ ಹೋಟೆಲ್ ಮುಂದೆಯೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ವೇಳೆ ಹೋಟೆಲ್ ಸಿಬ್ಬಂದಿಗಳು ಹಣೆಗೆ ಸಾಂಪ್ರದಾಯಿಕ ತಿಲಕವಿಟ್ಟು, ಹೂಗುಚ್ಚ ನೀಡಿ ಆಟಗಾರರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಒಂದೇ ಸಮನೆ ಮುಗಿಬಿದ್ದಿದ್ದು, ಅವರಿಗೆ ಕೊಂಚ ಇರಿಸುಮುರಿಸುಂಟು ಮಾಡಿತು.
ಹೋಟೆಲ್‌ನೊಳಗೆ ಬರುವಾಗ ಕೊಹ್ಲಿ ಒಂದು ಕೈನಲ್ಲಿ ಹೂಗುಚ್ಚ, ಇನ್ನೊಂದು ಕೈನಲ್ಲಿ ಅವರ ಖಾಸಗಿ ವಸ್ತುಗಳನ್ನು ಹಿಡಿದುಕೊಂಡಿದ್ದರು. ಹೀಗಿದ್ದೂ ಹೋಟೆಲ್ ಸಿಬ್ಬಂದಿ, ವಿರಾಟ್ ಕೊಹ್ಲಿಯ ಕೈಕುಲುಕಲು ಮುಂದಾದರು. ಆಗ ಕೊಹ್ಲಿ “ಸರ್, ನಂಗಿರೋದು ಎರಡೇ ಕೈಗಳು” ಎಂದು ಹೇಳುವ ಮೂಲಕ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದರು. ಆದರೆ ನಿಮ್ಮ ಪ್ರೀತಿಗೆ ಥ್ಯಾಂಕ್ಯೂ ಎಂದು ಹೇಳುತ್ತಾ ಮುನ್ನಡೆದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡಕ್ಕೆ ದಾಖಲೆಯ ಬಹುಮಾನ ಘೋಷಣೆ..!