ಕರ್ನಾಟಕದ ಮಾಜಿ ಸಿಎಂ ಹಾಗೂ ಮಾಜಿ ವಿದೇಶಾಂಗ ಸಚಿವ ಮತ್ತು ರಾಜ್ಯಪಾಲರಾಗಿ ರಾಜಕೀಯ ಕ್ಷೇತ್ರಕ್ಕೆ ಅಪರಿಮಿತ ಸೇವೆ ಸಲ್ಲಿಸಿದ್ದ ಹಿರಿಯ ರಾಜಕಾರಣಿ ಎಸ್. ಎಂ ಕೃಷ್ಣ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್ಎಂಕೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಮಾಜಿ ಸಿಎಂ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎಸ್ಎಂ ಕೃಷ್ಣ ನಿಧನಕ್ಕೆ ಸಂತಾಪ ಸೂಚಿಸಿದ ವಿಪಕ್ಷ ನಾಯಕ ಆರ್ ಅಶೋಕ್ ಅವರು, ಎಸ್.ಎಂಕೆಯವರು ನಮ್ಮ ಮಧ್ಯೆ ಇಲ್ಲ ಅಂತಾ ನಮಗೆ ಎಲ್ಲರಿಗೂ ದುಃಖ ತಂದಿದೆ. ಬೆಂಗಳೂರಿನ ಜನಕ್ಕೆ ಮರೆಯಲಾಗದ ವ್ಯಕ್ತಿ ಅಂದರೆ ಎಂಎಂಕೆಯವರು. ಬೆಂಗಳೂರು ಬೆಳೆಯೋದಕ್ಕೆ ದೊಡ್ಡ ಕಾಣಿಕೆ ನೀಡಿದ್ದಾರೆ. ಬೆಂಗಳೂರಿನ ಜನರು ಯಾವತ್ತಿಗೂ ಅವರನ್ನು ಮರೆಯೋಕೆ ಸಾಧ್ಯವಿಲ್ಲ. ಅವರು ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಜನರು ಮೆಚ್ಚುವ ರೀತಿಯಲ್ಲಿ ಅಭಿವೃದ್ಧಿ ಚಾಪು ಮೂಡಿಸಿದ್ಸಾರೆ. ಅವರ ಮನೆಗೆ ನಾನು ಬಹಳಷ್ಟು ಸಾರಿ ಹೋಗಿದ್ದೇನೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಾಗ ನಾನೇ ಅವರನ್ನು ಬೆಂಗಳೂರಿಂದ ದೆಹಲಿವರೆಗೆ ಕರೆದುಕೊಂಡು ಹೋಗಿದ್ದೆ. ಬಹಳ ಸ್ವಚ್ಚವಾಗಿ ಎಲ್ಲಾ ಭಾಷೆಗಳನ್ನು ಮಾತಾಡ್ತಿದ್ರು. ಅವರ ನಿಧನ ಆಗಿರೋದು ನಮಗೆ ಎಲ್ಲರಿಗೂ ಬಹಳ ನೋವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮಾಜಿ ಸಿಎಂ ಕೃಷ್ಣ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯದ ವಿಧಾನಸಭಾಧ್ಯಕ್ಷರು, ಉಪ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ, ದೇಶಕ್ಕೆ ತಮ್ಮದೇ ಆದ ಅನುಪಮ ಕೊಡುಗೆ ನೀಡಿದ್ದ ಹಿರಿಯರು, ಮುತ್ಸದ್ದಿಗಳಾದ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವುಂಟಾಯಿತು. ವೈಯಕ್ತಿಕವಾಗಿ ನನಗೆ ಅವರ ಅಗಲಿಕೆ ಬಹಳ ದುಃಖ ಉಂಟು ಮಾಡಿದೆ. ಆ ಚೇತನಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ರಾಜ್ಯದ ಜನತೆಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದಿದ್ದಾರೆ.
ಸಭಾಪತಿ ಯುಟಿ ಖಾದರ್ ಸಂತಾಪ : “ಎಸ್.ಎಂ.ಕೃಷ್ಣ ನಿಧನದ ವಿಚಾರ ತಿಳಿದು ತುಂಬಾ ದುಃಖವಾಗಿದೆ. ಎಸ್.ಎಂ.ಕೃಷ್ಣ ನಿಧನದಿಂದ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಎಸ್.ಎಂ.ಕೃಷ್ಣ ಅಜಾತಶತ್ರು, ಉತ್ತಮ ರಾಜಕಾರಣಿ ಆಗಿದ್ದರು. ಸಿಎಂ ಆಗಿ, ಕೇಂದ್ರ ಸಚಿವರಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದರು. ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಿದ್ದರು, ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಎಸ್.ಎಂ.ಕೃಷ್ಣ ಅವರು ರಾಜಕಾರಣದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದರು. ನಾನು ವಿದ್ಯಾರ್ಥಿಯಾಗಿದ್ದಾಗಲೇ ಎಸ್.ಎಂ.ಕೃಷ್ಣ ಜೊತೆ ಸಂಪರ್ಕ ಇತ್ತು” ಎಂದು ಸಂತಾಪ ಸೂಚಿಸಿದ್ದಾರೆ. “ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೆ. ಎಸ್.ಎಂ.ಕೃಷ್ಣ ಅವರ ಸಾಧನೆ ಯುವ ರಾಜಕಾರಣಿಗಳಿಗೆ ಸ್ಫೂರ್ತಿದಾಯಕವಾಗಿದೆ. ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.
ಸಚಿವ ಡಾ.ಜಿ.ಪರಮೇಶ್ವರ್ ಸಂತಾಪ : “ಎಸ್.ಎಂ.ಕೃಷ್ಣ ನಿಧನ ವಿಚಾರ ಕೇಳಿ ತುಂಬಾ ನೋವಾಗಿದೆ. ಉತ್ತಮ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ. ಸಿಎಂ ಆಗಿ, ಕೇಂದ್ರ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಬೆಂಗಳೂರು ನಗರದಲ್ಲಿ ಐಟಿ-ಬಿಟಿ ಸ್ಥಾಪನೆಗೆ ಕಾರಣರಾಗಿದ್ದರು. ಅವರಿಂದ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಹಲವು ಯೋಜನೆಗಳ ಜೊತೆ ಹಲವು ಸವಾಲುಗಳನ್ನು ಎದುರಿಸಿದ್ದರು. ರಾಜ್ಕುಮಾರ್ ಅಪಹರಣ ಸಮಯದಲ್ಲಿ ಸಮರ್ಥವಾಗಿ ನಿಭಾಯಿಸಿದ್ದರು. ಕಾವೇರಿ ನದಿ ನೀರು ವಿಚಾರದಲ್ಲೂ ಸಮರ್ಥವಾಗಿ ಕೆಲಸ ಮಾಡಿದ್ದರು. ಎಸ್ಎಂಕೆ ಅವರ ಸಾಧನೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ಎಸ್.ಎಂ.ಕೃಷ್ಣ ಅವರ ಜೊತೆ ಉತ್ತಮ ಒಡನಾಡ ಇತ್ತು ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ. ಎಸ್.ಎಂ.ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಗೃಹ ಸಚಿವ ಜಿ ಪರಮೇಶ್ವರ್ ಸಂತಾಪ ಸೂಚಿಸಿದ್ದಾರೆ.
“ಎಸ್ಎಂ ಕೃಷ್ಣ ಅವರು ನಮ್ಮನ್ನು ಅಗಲಿದ್ದಾರೆ, ಇದು ಬಹಳ ನೋವಿನ ಸಂಗತಿ. ರಾಜ್ಯಕ್ಕೆ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಸಿಎಂ, ವಿತ್ತ ಸಚಿವರಾಗಿ ಉತ್ತರ ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಹಲವು ಬಾರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಂಬನಿ ಮಿಡಿದಿದ್ದಾರೆ.
ಎಕ್ಸ್ ಖಾತೆಯಲ್ಲಿ ಟೀಟ್ ಮಾಡಿರುವ ಮಾಜಿ ಸಿಎಂ ಯಡಿಯೂರಪ್ಪ ಧೀಮಂತ ಮುತ್ಸದ್ಧಿ ರಾಜಕಾರಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ವಿದೇಶಾಂಗ ಸಚಿವರು, ಪಕ್ಷದ ಹಿರಿಯ ನಾಯಕ, ಪದ್ಮವಿಭೂಷಣ ಶ್ರೀ ಎಸ್.ಎಂ.ಕೃಷ್ಣ ಅವರು ನಮ್ಮನ್ನು ಬಿಟ್ಟು ಅಗಲಿದ ಸುದ್ದಿ ತಿಳಿದು ಅತೀವ ಆಘಾವಾಗಿದೆ. ರಾಷ್ಟ್ರ, ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ಒಬ್ಬ ಹಿರಿಯಣ್ಣನನ್ನು ಕಳೆದುಕೊಂಡ ನೋವು ನನಗಾಗಿದೆ. ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ, ಅಗಲಿದ ಆ ಹಿರಿಯ ಚೇತನಕ್ಕೆ ದೇವರು ಉತ್ತಮ ಸದ್ಗತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು, ಅಪಾರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ಟೀಟ್ ಮಾಡಿದ್ದಾರೆ.
ಡಿಸಿಎಂ ಡಿಕೆಶಿ ಸಂತಾಪ ಸೂಚಿಸಿ ನನ್ನ ರಾಜಕೀಯ ಬೆಳವಣಿಗೆಯ ಪ್ರತೀ ಹೆಜ್ಜೆಯಲ್ಲಿ ಮಾರ್ಗದರ್ಶಕರಾಗಿ ನಿಂತವರು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ. ಕೃಷ್ಣ ಅವರು. ಕಾಲಾನಂತರ ನಾವು ಒಂದು ಕುಟುಂಬವಾಗುತ್ತಿದ್ದಂತೆ ನಮ್ಮ ನಡುವಿನ ಬಂಧವು ಮತ್ತಷ್ಟು ಗಟ್ಟಿಯಾಯಿತು ಎಂದು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ಎಸ್.ಎಂ ಕೃಷ್ಣ ಬರೆದ ಕೊನೆಯ ಪತ್ರ ಇಲ್ಲಿದೆ.. ಏನಿದೆ ಆ ಲೆಟರ್ನಲ್ಲಿ?