ಟೀಮ್ ಇಂಡಿಯಾದ ಆರಂಭಿಕ ಆಟಗಾರನಾಗಿ ರನ್ಗಳ ಹೊಳೆ ಹರಿಸಿದ್ದ ಎಡಗೈ ಬ್ಯಾಟರ್ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಗಬ್ಬರ್ ಸಿಂಗ್ ಎಂದೇ ಫೇಮಸ್ ಆಗಿದ್ದ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆ ಬರೆದಿದ್ದಾರೆ.
2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಧವನ್ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾರೊಂದಿಗೆ ಭರ್ಜರಿ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೆ ಭಾರತ ತಂಡದ ಪರ ಲೀಡಿಂಗ್ ಸ್ಕೋರರ್ ಆಗಿದ್ದರು. ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ತಂಡ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿಯೂ ಶಿಖರ್ ಧವನ್ ಮಹತ್ತರ ಪಾತ್ರ ವಹಿಸಿದ್ದರು. ಶಿಖರ್ ಧವನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಧವನ್, ‘ನನ್ನ ಕ್ರಿಕೆಟ್ ಪಯಣದ ಈ ಅಧ್ಯಾಯವನ್ನು ನಾನು ಮುಕ್ತಾಯಗೊಳಿಸುತ್ತಿದ್ದೇನೆ. ನಾನು ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಯನ್ನು ನನ್ನೊಂದಿಗೆ ಒಯ್ಯುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ಜೈ ಹಿಂದ್!’ ಎಂದು ಬರೆದುಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ‘ಸಂಪೂರ್ಣ ಕಥೆಯನ್ನು ಓದಲು ನೀವು ಪುಟವನ್ನು ತಿರುಗಿಸಬೇಕು ಎಂಬ ಮಾತಿದೆ. ಅದನ್ನೇ ನಾನು ಮಾಡಲಿದ್ದೇನೆ. ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ನನ್ನ ವೃತ್ತಿಜೀವನದ ಉತ್ತಮ ಸಮಯದಲ್ಲಿ ದೇಶಕ್ಕಾಗಿ ತುಂಬಾ ಆಡಿರುವ ಕಾರಣ ಶಾಂತಿಯಿಂದ ನಿವೃತ್ತಿ ಘೋಷಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಮುಖವಾಡ ಕಳಚಿದೆ, ಅವರು ರಾಜೀನಾಮೆ ಕೊಡ್ಲೇಬೇಕು – ಬಿ.ವೈ ವಿಜಯೇಂದ್ರ..!