ಬೆಂಗಳೂರು : ಹೊರ ರಾಜ್ಯದಿಂದ ಕೆಲಸ ಹುಡುಕಿಕೊಂಡು ಬರುವವರಿಗೆ ಕೆಲಸ ಕೊಡುವ ಮುನ್ನ ಎಚ್ಚರವಾಗಿರಿ. ಏಕೆಂದರೆ ಇಲ್ಲೊಬ್ಬ ಚಿನ್ನದ ವ್ಯಾಪಾರಿ ನೇಪಾಳದಿಂದ ಬಂದಿದ್ದ ವ್ಯಕ್ತಿಗೆ ಕೆಲಸ ಕೊಟ್ಟು, ಇರೋಕೆ ಮನೆ ಕೊಟ್ಟರೂ ಆ ಕಿರಾತಕ ಮಾಲೀಕನ ಮನೆಗೆಯೇ ಕನ್ನ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು.. ಉದ್ಯಮಿ, ಅರಿಹಂತ್ ಜ್ಯುವೆಲ್ಲರಿ ಮಾಲೀಕ ಸುರೇಂದ್ರ ಕುಮಾರ್ ಜೈನ್ ಅವರ ವಿಜಯನಗರ ಹೊಸಹಳ್ಳಿ ಎಕ್ಸ್ಟೇಷನ್ ಮನೆಯಲ್ಲಿ ಬರೋಬ್ಬರಿ 15 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿದೆ. ಅವರ ಮನೆಯಲ್ಲಿಯೇ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ನಮ್ರಾಜ್ ಸುಮಾರು 18 ಕೆಜಿ 437ಗ್ರಾ. ಚಿನ್ನಾಭರಣ, 40 ಲಕ್ಷ ನಗದು ದೋಚಿ ಎಸ್ಕೇಪ್ ಆಗಿದ್ದಾನೆ.
ಸುರೇಂದ್ರ ಕುಮಾರ್ ನಮ್ರಾಜ್‌ಗೆ ಕೆಲಸ ಕೊಟ್ಟಿದ್ದಲ್ಲದೇ ಮನೆಯಿಲ್ಲದವನು ಎಂದು ಆತನಿಗೆ ಉಳಿದುಕೊಳ್ಳಲು ಆಶ್ರಯ ಕೂಡ ನೀಡಿದ್ದರು. ಈ ವೇಳೆ ಮನೆಯ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಆತ, ಮಾಲೀಕ ಸುರೇಂದ್ರ ಕುಮಾರ್ ಹಣ-ಚಿನ್ನಾಭರಣ ಇಡುವ ಜಾಗ ನೋಡಿಕೊಂಡಿದ್ದ. 30 ವರ್ಷಗಳಿಂದ ಚಿನ್ನದ ವ್ಯಾಪಾರ ಮಾಡುತ್ತಿರುವ ಸುರೇಂದ್ರ ಕುಮಾರ್ ಜೈನ್, ನವೆಂಬರ್ 1ರಂದು ತಮ್ಮ ಕುಟುಂಬ ಸಮೇತ ಗುಜರಾತ್ನ ಗಿರ್ನಾರ್ ಜಾತ್ರೆಗೆ ತೆರಳಿದ್ದರು. ಈ ವೇಳೆ 15 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿ ಆರೋಪಿ ನಮ್ರಾಜ್ ಎಸ್ಕೇಪ್ ಆಗಿದ್ದಾನೆ. ಈ ಕಿರಾತಕನ ಕತರ್ನಾಕ್ ಕೃತ್ಯ ನವಂಬರ್ 7 ರಂದು ಬೆಳಕಿಗೆ ಬಂದಿದೆ.
ಇನ್ನು ಸುರೇಂದ್ರ ಅವರು ಮನೆಯಲ್ಲಿ ಹೆಚ್ಚು ಸೆಕ್ಯೂರಿಟಿ ಅಂತಾ ಚಿನ್ನಾಭರಣ ಇಟ್ಟಿದ್ರು. ಸುರೇಂದ್ರ ಅಕ್ಕಂದಿರು ಕೂಡ 2 ಕೆಜಿ 790 ಗ್ರಾಂ ಚಿನ್ನಾಭರಣವನ್ನು ಮನೆಯಲ್ಲಿ ಇಟ್ಟಿದ್ದರು. ಸದ್ಯ 40 ಲಕ್ಷ ನಗದು, 14 ಕೋಟಿ 75 ಲಕ್ಷ ಮೌಲ್ಯದ 18 ಕೆಜಿ 437 ಗ್ರಾ ಚಿನ್ನಭಾರಣ ಕಳ್ಳತನವಾಗಿದೆ ಎಂದು ಸುರೇಂದ್ರ ಕುಮಾರ್ ಜೈನ್ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ನಮ್ರಾಜ್ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಶೃಂಗೇರಿ ಮಠದ ಜ್ಞಾನೋದಯ ಕಾಲೇಜು ಡೆಮಾಲಿಷನ್ಗೆ ತಡೆ – ಯಥಾಸ್ಥಿತಿಗೆ BBMP ಆದೇಶ..!