ಬೆಳಗಾವಿ : ರಾಜ್ಯದಲ್ಲಿ ಇದೀಗ ವಕ್ಫ್ ಆಸ್ತಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದನ್ನು ವಿರೋಧಿಸಿ ರಾಜ್ಯ ಬಿಜೆಪಿನಾಯಕರು ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಆದರೆ ಇದೀಗ ವಕ್ಫ್ ಬೋರ್ಡ್ ವಕ್ರ ದೃಷ್ಟಿ ಬಿಜೆಪಿಯ ಪ್ರತಿಷ್ಠಿತ ಕುಟುಂಬದ ಮೇಲೆಯೇ ಬಿದ್ದಿದೆ.
ಮಾಜಿ ಹಜ್ ಮತ್ತು ವಕ್ಫ್ ಬೋರ್ಡ್ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬಕ್ಕೆ ವಕ್ಫ್ ಬೋರ್ಡ್ ಶಾಕ್ ನೀಡಿದೆ. ಜೊಲ್ಲೆ ದಂಪತಿಯ ಕಿರಿಯ ಪುತ್ರನಿಗೆ ಸೇರಿದ ಜಮೀನಿನ ಪಹಣಿ ಪತ್ರದಲ್ಲಿ “ವಕ್ಫ್ ಆಸ್ತಿ” ಎಂದು ನಮೂದಿಸಲಾಗಿದೆ. ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಕಿರಿಯ ಪುತ್ರ ಬಸವ ಪ್ರಸಾದ್ ಜೊಲ್ಲೆ ಅವರಿಗೆ ಸೇರಿದ 2 ಎಕರೆ 13 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ಹೆಸರು ಸೇರ್ಪಡೆಯಾಗಿದೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಸರ್ವೆ ನಂಬರ್ 337ರಲ್ಲಿ ಬಸವಪ್ರಭು ಜೊಲ್ಲೆ ಅವರಿಗೆ ಸೇರಿದ 2 ಎಕರೆ 13 ಗುಂಟೆ ಜಮೀನು ಇದೆ. ಈ ಜಮೀನಿನಲ್ಲಿ ಜೊಲ್ಲೆ ಕುಟುಂಬ ತಲ-ತಲಾಂತರಗಳಿಂದ ಉಳಿಮೆ ಮಾಡುತ್ತಾ ಬಂದಿದೆ. ಆದರೆ, 2021ರಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ವಕ್ಫ್ ಬೋರ್ಡ್ ಸಚಿವರಾಗಿದ್ದ ಸಮಯದಲ್ಲೇ ತಮ್ಮ ಕಿರಿಯ ಪುತ್ರ ಬಸವ ಪ್ರಸಾದ್ ಅವರಿಗೆ ಸೇರಿದ ಜಮೀನು ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದಾಗಿದೆ. ವಕ್ಫ್ ಆಸ್ತಿ ಎಂದು ಉಲ್ಲೇಖಿತ ಪಹಣಿ ಪತ್ರ ನೋಡಿ ಬಸವಪ್ರಸಾದ್ ಜೊಲ್ಲೆ ದಂಗಾಗಿದ್ದಾರೆ.
ಶಶಿಕಲಾ ಜೊಲ್ಲೆ ಅವರು ತಾವು ಸಚಿವೆಯಾಗಿದ್ದ ಸಮಯದಲ್ಲೇ ತಮ್ಮ ಪುತ್ರನ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದು ಆಗಿದ್ದು ವಿಪಾರ್ಯಾಸವಾಗಿದೆ. ಅಲ್ಲದೇ, ಇವರ ಅವಧಿಯಲ್ಲಿ ಅನೇಕ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದು ಮಾಡಲಾಗಿದೆ. ಬಿಜೆಪಿಯ ಶಾಸಕಿ ಕುಟುಂಬಕ್ಕೆ ವಕ್ಫ್ ಹೆಸರು ಕಂಡು ಜನಸಾಮಾನ್ಯರು, ರೈತರು ದಂಗಾಗಿದ್ದಾರೆ. ಇನ್ನು, ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಈವರೆಗೆ ವಕ್ಫ್ ಬೋರ್ಡ್‌ನಿಂದ ಬಸವ ಪ್ರಸಾದ್ ಅವರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ.
ಇದನ್ನೂ ಓದಿ : ಬೆಂಗಳೂರಲ್ಲಿ ಅಮಾನವೀಯ ಘಟನೆ.. ಯುವಕ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ರು ನೆರವಿಗೆ ಬಾರದ ಪೊಲೀಸರು..!