ಮುಂಬೈ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಅನಾಮಧೇಯ ವ್ಯಕ್ತಿ 2 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟು, ಹಣ ಪಾವತಿಸದಿದ್ದರೆ ನಟನನ್ನು ಹತ್ಯೆ ಮಾಡುವುದಾಗಿ ಸಂದೇಶ ರವಾನಿಸಿದ್ದಾನೆ. ಬೆದರಿಕೆ ಸಂದೇಶವನ್ನು ಸ್ವೀಕರಿಸಿದ ನಂತರ, ಮುಂಬೈನ ವರ್ಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಇತ್ತೀಚೆಗೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಶಾಸಕ, ದಿವಂಗತ ಬಾಬಾ ಸಿದ್ದಿಕಿ ಅವರ ಪುತ್ರ ಜೀಶಾನ್ ಸಿದ್ದಿಕಿ ಮತ್ತು ಸಲ್ಮಾನ್ ಖಾನ್ ಅವರಿಗೆ ಬಂದ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಂಗಳವಾರ ನೋಯ್ಡಾದಲ್ಲಿ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಗುರ್ಫಾನ್ ಖಾನ್ ಎಂದು ಕರೆಯಲ್ಪಡುವ ಮೊಹಮ್ಮದ್ ತಯ್ಯಬ್ ಎಂದು ಗುರುತಿಸಲಾದ ಆರೋಪಿಯನ್ನು ನೋಯ್ಡಾದ ಸೆಕ್ಟರ್ 39ರಲ್ಲಿ ಬಂಧಿಸಲಾಗಿದೆ.
ಸಲ್ಮಾನ್ ಖಾನ್ ಅವರಿಗೆ ಆಪ್ತರಾಗಿದ್ದ ಬಾಬಾ ಸಿದ್ದಿಕಿ ಅವರನ್ನು ಅಕ್ಟೋಬರ್ 12 ರಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದಾಳಿ ನಡೆಸಿ ಹತ್ಯೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 15 ಮಂದಿಯನ್ನು ಬಂಧಿಸಿದ್ದಾರೆ. ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಜಾರ್ಖಂಡ್‌ನ ಜೆಮ್‌ಶೆಡ್‌ಪುರದ ಶೇಖ್ ಹುಸೇನ್ ಶೇಖ್ ಮೌಸಿನ್ ನನ್ನ (24) ಅ.23 ರಂದು ಮುಂಬೈ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : ಫಲಿಸಿತು ಪ್ರಾರ್ಥನೆ.. ದರ್ಶನ್‌ಗೆ ಬೇಲ್ ಸಿಗ್ತಿದ್ದಂತೆ ಕಾಮಾಕ್ಯ ದೇವಿಗೆ ಧನ್ಯವಾದ ತಿಳಿಸಿದ ವಿಜಯಲಕ್ಷ್ಮಿ..!