ಬೆಂಗಳೂರು : ವಿದ್ಯುತ್ ವಲಯದಲ್ಲಿ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ರಾಜ್ಯ ಸರ್ಕಾರ ಹೊಸ ಇತಿಹಾಸ ಸೃಷ್ಟಿಸಿದೆ. ಇಂಧನ ಇಲಾಖೆ ರಾಜ್ಯದಲ್ಲಿ ಕಳೆದ ಎಪ್ರಿಲ್1ರಿಂದ 1,403 ಕೋಟಿ ರೂ. ಮೌಲ್ಯದ ವಿದ್ಯುತ್ ಮಾರಾಟ ಮಾಡಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.
ಈ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಕೆ.ಜೆ ಜಾರ್ಜ್ ಮಾತನಾಡಿ, 2024ರ ಏಪ್ರಿಲ್ 1ರಿಂದ ಜುಲೈ ಅಂತ್ಯದವರೆಗೆ 1,403 ಕೋಟಿ ರೂ. ಮೊತ್ತದ ವಿದ್ಯುತ್ ಮಾರಾಟ ಮಾಡಲಾಗಿದೆ. ಮೇ 18ರವರೆಗೆ ವಿದ್ಯುತ್ ಖರೀದಿ ಹೆಚ್ಚಾಗಿದ್ದರೆ, ನಂತರದಲ್ಲಿ ಮಾರಾಟ ಹೆಚ್ಚಾಗಿದೆ. ಪ್ರತಿನಿತ್ಯ 30ರಿಂದ 40 ಕೋಟಿ ರೂ. ಮೊತ್ತದ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ರಾಜ್ಯದಲ್ಲಿ ನಿತ್ಯ ಸರಾಸರಿ 250 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಪೈಕಿ 20 ಮಿಲಿಯನ್ ಯೂನಿಟ್ಅನ್ನು ಬೇಸಿಗೆಯಲ್ಲಿ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆದುಕೊಂಡಿರುವ ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಪೂರೈಸಲಾಗುತ್ತಿದೆ. 40ರಿಂದ 50 ಮಿಲಿಯನ್ ಯೂನಿಟ್ ಮಾರಾಟ ಮಾಡಲಾಗುತ್ತಿದೆ. 180 ಮಿಲಿಯಿನ್ ಯೂನಿಟ್ ವಿದ್ಯುತ್ ರಾಜ್ಯದಲ್ಲಿ ಬಳಕೆಯಾಗುತ್ತಿದೆ ಎಂದು ಹೇಳಿದರು.
ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ 1,006, ಬಳ್ಳಾರಿ ಉಷ್ಣ ವಿದ್ಯುತ ಸ್ಥಾವರದಲ್ಲಿ 1,049, ಯರಮರಸ್ ಉಷ್ಣ ವಿದ್ಯುತ ಸ್ಥಾವರದಲ್ಲಿ 898 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮಳೆ ಹೆಚ್ಚಾಗಿದ್ದರಿಂದ ಜಲ ವಿದ್ಯುತ್ ಉತ್ಪಾದನಾ ಪ್ರಮಾಣ 34.96 ಮಿಲಿಯನ್ ಯೂನಿಟ್ ವರೆಗೆ ಹೆಚ್ಚಾಗಿದೆ. ಸೌರ ಶಕ್ತಿಯಿಂದ 34.64 ಹಾಗೂ ಪವನದಿಂದ 60.05 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ, ಆರ್ ಟಿಪಿಎಸ್ ನ ಉತ್ಪಾದನಾ ಘಟಕಗಳು ಬೇಸಿಗೆಯಲ್ಲಿ ಸತತ 103 ದಿನ ವಿದ್ಯುತ್ ಉತ್ಪಾದಿಸಿ ದಾಖಲೆ ನಿರ್ಮಿಸಿವೆ ಎಂದು ತಿಳಿಸಿದರು.
ಇದನ್ನೂ ಓದಿ : ಆಸ್ತಿ ವಿವಾದ – ಸಂಬಂಧಿಕರಿಂದಲೇ ಮಹಿಳೆ ಹಾಗೂ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ..!