ಬೆಂಗಳೂರು : ಕಾಂತಾರ ಸಿನಿಮಾದ ಮೂಲಕ ಭಾರತೀಯ ಸಿನಿರಂಗ ಹುಬ್ಬೇರುವಂತೆ ಮಾಡಿದ್ದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಾಲಿವುಡ್‌ಗೆ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ಜೈ ಹನುಮಾನ್ ಸಿನಿಮಾದಲ್ಲಿ ಹನುಮಾನ್ ಪಾತ್ರದ ಮೂಲಕ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಡೋದನ್ನು ಖಚಿತಪಡಿಸಿದ್ದ ರಿಷಬ್ ಶೆಟ್ಟಿ, ಬಾಲಿವುಡ್‌ಗೆ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಸಂದೀಪ್ ಸಿಂಗ್ ನಿರ್ದೇಶನದ ‘ದ ಪ್ರೈಡ್ ಆಫ್ ಭಾರತ್ : ಛತ್ರಪತಿ ಶಿವಾಜಿ ಮಹಾರಾಜ್’ ಹೆಸರಿನಲ್ಲಿ ಶಿವಾಜಿ ಮಹಾರಾಜರ ಬಯೋಪಿಕ್ ಬಾಲಿವುಡ್‌ನಲ್ಲಿ ಘೋಷಣೆಯಾಗಿದ್ದು, ಇದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ರಿಷಬ್ ಶೆಟ್ಟಿ ಮಾಡುತ್ತಿದ್ದಾರೆ.
ಈ ಕುರಿತು ನಟ ರಿಷಬ್ ಶೆಟ್ಟಿ ಸಿನಿಮಾದ ಪೋಸ್ಟರ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ಕನ್ನಡದ ಸಿನಿ ಪ್ರೇಕ್ಷಕರಿಂದ ಪರ ವಿರೋಧದ ಚರ್ಚೆಗಳು ಆರಂಭವಾಗಿದೆ. ಕನ್ನಡ ಸಿನಿ ಅಭಿಮಾನಿಗಳು ರಿಷಬ್ ಶೆಟ್ಟಿ ವಿರುದ್ದ ಗರಂ ಆಗಿದ್ದು, ಛತ್ರಪತಿ ಶಿವಾಜಿ ಪಾತ್ರ ಬೇಡ ಎಂದು ಹೇಳುತ್ತಿದ್ದಾರೆ. ರಿಷಬ್ ಶೆಟ್ಟಿ ವಿರುದ್ಧ ಕನ್ನಡಪರ ಸಂಘಟನೆಗಳು ತಿರುಗಿಬಿದ್ದಿದ್ದು, ಕನ್ನಡದಿಂದ ನಟನನ್ನು ಬ್ಯಾನ್ ಮಾಡಿ ಎಂಬ ಕೂಗುಗಳು ಕೇಳಿಬಂದಿದೆ.
ಇದು ಉತ್ತಮ ಆಯ್ಕೆಯಲ್ಲ. ಈ ಸಿನಿಮಾ ಬೇಕಿರಲಿಲ್ಲ ಶೆಟ್ರೆ. ಕರ್ನಾಟಕಕ್ಕೆ ಶಿವಾಜಿ ಕೊಡುಗೆ ಏನಿದೆ? ಆತನ ಜೀವನಾಧರಿತ ಕಥೆಯಲ್ಲಿ ನೀವು ಯಾಕೆ ನಟಿಸಬೇಕು? ಎಂದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ನಾಟಕದ ಸಾಕಷ್ಟು ಮಹಾನ್ ನಾಯಕರ ಕಥೆಗಳಿವೆ. ಕದಂಬರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಅರಸರು, ಒಡೆಯರು ಹೀಗೆ ಕನ್ನಡ ಅರಸರ ಗತ ವೈಭವ ಹೇಳುವ ಸಿನಿಮಾಗಳನ್ನು ಮಾಡಿ. ಶಿವಾಜಿ ಕಥೆ ನಮಗೆ ಬೇಕಿಲ್ಲ ಎಂದು ಕೆಲವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಕೆಲವರು ‘ಮರಾಠರಿಗೆ ಶಿವಾಜಿ ರಾಜನೇ ಇರಬಹುದು, ಕನ್ನಡಿಗರಿಗೆ ಆತ ದಾಳಿಕೋರ. ರಿಷಬ್ ಯಾವುದೇ ಕಾರಣಕ್ಕೂ ಶಿವಾಜಿ ಸಿನಿಮಾ ಮಾಡ್ಬೇಡಿ ಅಂತಾ ಆಗ್ರಹಿಸಿದ್ದಾರೆ. ರಿಷಬ್ ವಿರುದ್ಧ ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆಗೂ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಾಗೆಯೇ ಕನ್ನಡ ಚಿತ್ರರಂಗಕ್ಕೆ ಧಕ್ಕೆ ತರುವ ಇಂಥಾ ಹೀರೋಗಳು ನಮಗೆ ಬೇಡ. ಕನ್ನಡ ಚಿತ್ರರಂಗದಿಂದ ರಿಷಬ್ ಶೆಟ್ಟಿಯನ್ನು ಓಡಿಸಿ ಎಂದು ಆಕ್ರೋಶ ಹೋರಹಾಕಿದ್ದು, ರಿಷಬ್ ಶೆಟ್ಟಿಯ ಯಾವ ಕನ್ನಡ ಸಿನಿಮಾಗೂ ಬೆಂಬಲವಿಲ್ಲ ಎಂದು ಸಿಟ್ಟಾಗಿದ್ದಾರೆ. ರಿಷಬ್ ಬ್ಯಾನ್ಗೆ ಮನವಿ ಸಲ್ಲಿಸಲೂ ಕೆಲ ಕನ್ನಡ ಸಂಘಟನೆಗಳ ತಯಾರಿ ಮಾಡಿಕೊಂಡಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಭ್ರಷ್ಟಾಚಾರ ಕೇಸ್ – ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ಗೆ ಕೋರಿ ರಾಜ್ಯಪಾಲರಿಗೆ ಕಡತ ರವಾನಿಸಿದ ಸರ್ಕಾರ..!