ನವದೆಹಲಿ : ಕೇರಳದಲ್ಲಿ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿದೆ. ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸುವುದನ್ನು ಎಐಸಿಸಿ ಮಂಗಳವಾರ ಖಚಿತಪಡಿಸಿದೆ. ಪ್ರಿಯಾಂಕಾ ಗಾಂಧಿ ಹೆಸರು ಸೇರಿದಂತೆ ಮೂರು ಅಭ್ಯರ್ಥಿಗಳನ್ನು ಘೋಷಿಸಿ ಕಾಂಗ್ರೆಸ್ ಪಟ್ಟಿ ಹೊರಡಿಸಿದೆ.
ಕುತೂಹಲ ಕೆರಳಿಸಿದ್ದ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸಲಾಗಿದ್ದು, ಇದು ಪ್ರಿಯಾಂಕಾ ಗಾಂಧಿ ಅವರ ಮೊದಲ ಚುನಾವಣೆಯಾಗಿದೆ. ಕೇರಳದ ಪಲಕ್ಕಾದ ವಿಧಾನಸಭಾ ಕ್ಷೇತ್ರಕ್ಕೆ ರಾಹುಲ್ ಮಮ್ಕೋತಾಥಿಲ್ ಹಾಗೂ ಛೆಲಕ್ಕಾರ (ಎಸ್‌ಸಿ) ವಿಧಾನಸಭಾ ಕ್ಷೇತ್ರದಿಂದ ರಮ್ಯಾ ಹರಿದಾಸ್ ಅವರನ್ನು ಎಐಸಿಸಿ ಕಣಕ್ಕಿಳಿಸುತ್ತಿದೆ.
ವಾಯನಾಡು ಕ್ಷೇತ್ರದಿಂದ ಆಯ್ಕೆ ಆಗಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಆ ಸ್ಥಾನಕ್ಕೆ ಉಪಚುನಾವಣೆ ನಡೆಸುವ ಅನಿವಾರ್ಯವಾಗಿತ್ತು. ಸದ್ಯ ಅವರ ನಂತರ ಯಾರು ಆ ಸ್ಥಾನದಿಂದ ಸ್ಪರ್ಧಿಸಬಹುದಾದ ಪ್ರಬಲರು ಎಂಬ ಕುತೂಹಲ ಹೆಚ್ಚಾಗಿತ್ತು. ಪ್ರಿಯಾಂಕಾ ಗಾಂಧಿ ಅವರ ಸ್ಪರ್ಧೆಗೆ ಹಲವು ವರ್ಷಗಳಿಂದ ಒತ್ತಾಯ ಕೇಳಿ ಬಂದಿತ್ತು. ಆದರೆ ಅದಕ್ಕೆ ಸರಿಯಾದ ಸಮಯ ಕೂಡಿ ಬಂದಿರಲಿಲ್ಲ. ಇದೀಗ ವಯನಾಡ್‌ನಿಂದ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಣಕ್ಕೆ ಇಳಿದಿದ್ದಾರೆ. ಅದರಂತೆ ಎಐಸಿಸಿ ಅವರನ್ನೇ ಕಣಕ್ಕಿಳಿಸಿ ಪಟ್ಟಿ ಬಿಡುಗಡೆ ಮಾಡಿದೆ.
52 ವರ್ಷದ ಪ್ರಿಯಾಂಕಾ ಗಾಂಧಿ 1999ರಿಂದಲೂ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದು, ಆರಂಭದಲ್ಲಿ ಅಮೇಠಿಯಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿಯವರ ಪರ ಪ್ರಚಾರ ಮಾಡಿದ್ದರು. ಈ ಮೂಲಕ ರಾಜಕೀಯದಲ್ಲಿ ತನ್ನ ಸುದೀರ್ಘ ಉಪಸ್ಥಿತಿಯ ಹೊರತಾಗಿಯೂ ಪ್ರಿಯಾಂಕಾ ಎಂದೂ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಈಗ ತಮ್ಮ ಚೊಚ್ಚಲ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಒಂದು ವೇಳೆ ವಯನಾಡ್ನಲ್ಲಿ ಪ್ರಿಯಾಂಕ ಗೆಲುವು ಸಾಧಿಸಿದರೆ, ಗಾಂಧಿ ಕುಟುಂಬದ ಮೂವರು ಸಂಸತ್ತಿಗೆ ಪ್ರವೇಶಿಸಿದಂತಾಗುತ್ತದೆ.
ಇದನ್ನೂ ಓದಿ : ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ..!