ಬೆಂಗಳೂರು : ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈಗಾಗಲೇ ನಕಲಿ ಪರಶುರಾಮನ ಮೂರ್ತಿ ಸ್ಥಾಪನೆ ಆರೋಪದ ತನಿಖೆ ಹಿನ್ನೆಲೆಯಲ್ಲಿ ಉಡುಪಿ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅಮಾನತು ಮಾಡಲಾಗಿದೆ. ಇದೀಗ ಕೇಸ್ ಸಂಬಂಧ ಬೆಂಗಳೂರಿನ ಉಲ್ಲಾಳದ ಬಳಿ ಇರೋ ಕ್ರಿಶ್ ಆರ್ಟ್ ವರ್ಲ್ಡ್ನಲ್ಲಿ ಪೊಲೀಸರು ಮಹಜರ್ ನಡೆಸಿದ್ದಾರೆ.
ಕಾರ್ಕಳ ಪೊಲೀಸರಿಂದ ಮಹಜರು ಪ್ರಕ್ರಿಯೆ ನಡೆದಿದ್ದು, ಮಹಜರು ಮುಗಿಸಿ ಪೊಲೀಸರು ಪರಶುರಾಮ ಬಿಡಿಭಾಗಗಳ ತೆಗೆದುಕೊಂಡ ಹೋಗಿದ್ದಾರೆ. ಸುಮಾರು 8 ಟನ್ನಷ್ಟು ಪರಶುರಾಮ್ ಮೂರ್ತಿಯ ಬಿಡಿಭಾಗಗಳು ಸೀಜ್ ಆಗಿದೆ. ಹೈಕೋರ್ಟ್ ಆದೇಶದಂತೆ ಮರುನಿರ್ಮಾಣ ಕಾರ್ಯಕ್ಕೆ ಮೂರ್ತಿ ತರಲಾಗಿತ್ತು. ತನಿಖೆ ಸಂಬಂಧ ಪೊಲೀಸರು ಮಹಜರು ಪ್ರಕ್ರಿಯೆಗೆ ಬಂದಿದ್ದರು.
18 ಟನ್ ತೂಕದ ಪರಶುರಾಮ ವಿಗ್ರಹದ ತಲೆ ಕಾಲು ಸೊಂಟ ತೊಡೆ ಹಾಗೂ ಬಾಣದ ಕುಂಡಲವನ್ನು ಸೀಜ್ ಮಾಡಲಾಗಿದೆ. 2023 ರ ಜನವರಿಯಲ್ಲಿ ಕಾರ್ಕಳ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ವಿಗ್ರಹ ಪ್ರತಿಷ್ಠಾಪನೆ ಆಗಿತ್ತು. ವಿಗ್ರಹ ಮೂರ್ತಿ ಕಾರ್ಯ ಪೂರ್ಣಗೊಳ್ಳದೇ ಉದ್ಘಾಟನೆ ಮಾಡಿರೊ ಆರೋಪ ಕೇಳಿಬಂದಿತ್ತು.
ಪ್ರಕರಣ : ಕಳೆದ ಬಿಜೆಪಿ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್ ನೇತೃತ್ವದಲ್ಲಿ ಉಮ್ಮಿಕಲ್ ಬೆಟ್ಟದ ಮೇಲೆ ಪರಶುರಾಮನ ಥೀಂ ಪಾರ್ಕ್ ನಿರ್ಮಾಣವಾಗಿತ್ತು. ಚುನಾವಣಾ ಪೂರ್ವದಲ್ಲಿ ಅಂದಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಥೀಂ ಪಾರ್ಕ್ ಮತ್ತು ಪರಶುರಾಮನ ಭವ್ಯ ಮೂರ್ತಿ ಲೋಕಾರ್ಪಣೆ ಮಾಡಿದ್ದರು. ನಂತರ ದಿನಗಳಲ್ಲಿ ಕಾಮಗಾರಿ ಬಾಕಿ ಇದೆ ಎನ್ನುವ ಕಾರಣಕ್ಕೆ ಥೀಂ ಪಾರ್ಕ್‌ಗೆ ಪ್ರವಾಸಿಗರ ನಿಷೇಧ ಹೇರಲಾಗಿತ್ತು.
ಇದು ಸ್ಥಳೀಯರಿಗೆ ಅನುಮಾನ ಮೂಡಿಸಿದ ಪರಿಣಾಮ ತನಿಖೆ ನಡೆಸಿದಾಗ ಮೂರ್ತಿ ಅಸಲಿಯತ್ತು ಹೊರಬಿದ್ದಿತ್ತು. ಹಿತ್ತಾಳೆ ಮೂರ್ತಿಯ ಬದಲು ಫೈಬರ್ ಮೂರ್ತಿ ಸ್ಥಾಪನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಬಳಿಕ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನ ಪರಶುರಾಮ ಮೂರ್ತಿ ಏಕಾಏಕಿ ಕಾಣೆಯಾಗಿತ್ತು. ಈ ಕುರಿತು ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು. ನಿರ್ಮಾಣದ ಗುಣಮಟ್ಟದ ಜೊತೆಗೆ ಧಾರ್ಮಿಕ ಭಾವನೆಗೆ ಅಪಚಾರ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿ ಸಿಒಡಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ನಮ್ಮ ಮೆಟ್ರೋ ಟ್ರ್ಯಾಕ್ಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!