ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ಗೆ ರಾಜಾತಿಥ್ಯ ನೀಡಿದ ಆರೋಪದ ಮೇಲೆ ಸುದ್ದಿಯಾಗಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಆಗ್ನೇಯ ವಿಭಾಗದ ಪೊಲೀಸರ ತಂಡ ದಾಳಿ ನಡೆಸಿದೆ. ಈ ದಾಳಿ ವೇಳೆ ಕೈದಿಗಳು, ಜೈಲಧಿಕಾರಿಗಳು, ಭದ್ರತೆಯ KSISF ಸಿಬ್ಬಂದಿ ಕಳ್ಳಾಟ ಬಯಲಾಗಿದ್ದು, ಜೈಲ್ ಸೆಲ್ನಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದ್ದಾರೆ.
ಏಕಾಏಕಿ ದಾಳಿ ನಡೆಸಿದ ಪೊಲೀಸರಿಗೆ ತಪಾಸಣೆ ವೇಳೆ ವಿಲ್ಸನ್ ಗಾರ್ಡನ್ ನಾಗ ಮತ್ತು ಆತನ ಸಹಚರರ ಸುಮಾರು 11 ಮೊಬೈಲ್ ಫೋನ್‌ಗಳು, ಸಿಗರೇಟ್, ಚಾಕು ಮತ್ತಿತರ ವಸ್ತುಗಳು ಪತ್ತೆಯಾಗಿದೆ. ಕೈದಿಗಳು ಬಾತ್ ರೂಂನಲ್ಲಿರುವ ನೀರಿನ ಪೈಪ್ ಒಳಗೆ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಮೊಬೈಲ್ ಬಚ್ಚಿಟ್ಟಿದ್ದರು. ಯಾರಿಗೂ ಡೌಟ್ ಬರಬಾರದು ಅಂತಾ ಆಗಾಗ ಪೈಪ್ ಒಳಗೆ ನೀರು ಬಿಡ್ತಿದ್ದರು.
ಇನ್ನು ಪವರ್ ಕಂಟ್ರೋಲ್ ರೂಂನಲ್ಲಿ ದುಬಾರಿ ಬೆಲೆಯ ಆಂಡ್ರಾಯ್ಡ್ ಮೊಬೈಲ್ ಸೇರಿ 15 ಮೊಬೈಲ್ ಪತ್ತೆಯಾಗಿದ್ದು, ಶಿಕ್ಷಾ ಬಂಧಿಗಳ C ಬ್ಲಾಕ್ನಲ್ಲಿ 2 ಸ್ವವ್ಗಳನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. ಅದರಂತೆ ಹೈ ಸೆಕ್ಯುರಿಟಿ ಬ್ಲಾಕ್ ಹಿಂಭಾಗದ ಬ್ಯಾರಕ್ನಲ್ಲಿ 5 ಎಲೆಕ್ಟ್ರಿಕ್ ಸ್ಟವ್ ಪತ್ತೆಯಾಗಿವೆ. 5 ಚಾಕುಗಳು, ಒಂದು ಪೆನ್ ಡ್ರೈವ್, 2 ಇಯರ್ ಬಡ್ಸ್ ಸೇರಿ 36 ಸಾವಿರ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ನಿರ್ದೇಶನದಲ್ಲಿ ಒಬ್ಬ ಎಸಿಪಿ, ಇಬ್ಬರು ಇನ್ಸ್ಪೆಕ್ಟರ್ಗಳು, ಪಿಎಸ್ಐ ಹಾಗೂ ಸಿಬ್ಬಂದಿ ಸೇರಿದಂತೆ 30 ಜನರ ತಂಡ ಜೈಲಿನಲ್ಲಿ ಶೋಧ ನಡೆಸಿದ್ದು, ಸದ್ಯ ಕರ್ತವ್ಯಲೋಪದ ಆರೋಪದಡಿ ಜೈಲಧಿಕಾರಿಗಳು, ಕಾರಾಗೃಹದ ಭದ್ರತಾ ಉಸ್ತುವಾರಿ ಹೊಂದಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ, ವಿಚಾರಣಾಧೀನ ಕೈದಿಗಳು ಮತ್ತು ಸಜಾ ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ FIR ದಾಖಲಿಸಲಾಗಿದೆ.
ಇದನ್ನೂ ಓದಿ : ಸುಳ್ಳು FIR, ಸುಳ್ಳು ಚಾರ್ಜ್ಶೀಟ್ ಹಾಕಿದ ವರ್ತೂರು ಪೊಲೀಸರ ವಿರುದ್ದ ಕ್ರಮಕ್ಕೆ ಹೈಕೋರ್ಟ್ ಆದೇಶ..!