ಬೆಳಗಾವಿ : ಮದ್ವೆ ಮಂಟಪದಿಂದಲೇ ಫೋಟೋಗ್ರಾಫರ್ ಒಬ್ಬರನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನಗರದ KPTCL ಕಲ್ಯಾಣ ಮಂಟಪದಲ್ಲಿ ನಡೆದಿದೆ. ಕಿಡ್ನಾಪ್ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಹರಣಕ್ಕೆ ಒಳಗಾಗಿ ಹಲ್ಲೆಗೆ ಒಳಗಾದಂತಹ ಫೋಟೋಗ್ರಾಫರ್ನನ್ನು ಉಮೇಶ್ ಹೊಸೂರು ಎಂದು ಗುರುತಿಸಲಾಗಿದೆ.
ಉಮೇಶ್ ಬೈಲಹೊಂಗಲ ಪಟ್ಟಣದಲ್ಲಿ ವಾಸವಾಗಿದ್ದರು. ನಾಲ್ಕು ದಿನಗಳ ಹಿಂದೆ ಮದುವೆ ಆರ್ಡರ್ ಅಂತ ಬೆಳಗಾವಿಗೆ ಬಂದಿದ್ದರು. ಆತನನ್ನ ಹಿಂಬಾಲಿಸಿಕೊಂಡು ಬಂದಿದ್ದ ನಾಲ್ವರು ದುಷ್ಕರ್ಮಿಗಳು, ಕಲ್ಯಾಣ ಮಂಟಪಕ್ಕೆ ಬಂದು ಹೊರಗೆ ಕರೆದೊಯ್ದಿದ್ದರು. ಬಳಿಕ ಅಲ್ಲಿಂದ ಕಾರಿನಲ್ಲಿ ಕಿಡ್ನಾಪ್ ಮಾಡಿ ಎಸ್ಕೇಪ್ ಆಗಿದ್ದಾರೆ.
ಬೈಲಹೊಂಗಲ ತಾಲೂಕಿನ ಚಿವಟಗೊಂಡಿ ಕ್ರಾಸ್ ಬಳಿ ಕಾರು ನಿಲ್ಲಿಸಿ, ರಾಡ್ನಿಂದ ಹಲ್ಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಅವರನ್ನು ಅಲ್ಲಿಗೆ ಬಿಟ್ಟು ಹೋಗಿದ್ದಾರೆ. ಉಮೇಶ್ ಹೆಣ್ಣು ಮಕ್ಕಳನ್ನು ಕಾಡಿಸುತ್ತಿದ್ದ ಎಂದು ಆರೋಪ ಕೇಳಿ ಬಂದಿದ್ದರಿಂದ ಹಲ್ಲೆ ನಡೆಸಲಾಗಿದೆ.
ಇನ್ನು ಈ ಸಂಬಂಧ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಾಗುತ್ತಿದ್ದಂತೆ ಇಬ್ಬರು ಮಹಿಳೆಯರು ಸೇರಿ 8 ಜನರನ್ನು ಬಂಧಿಸಲಾಗಿದೆ. ವಿಕ್ಕಿ, ಪ್ರವೀಣ್ ಉಮರಾಣಿ ಬಸವರಾಜ ನರಟ್ಟಿ ಸೇರಿದಂತೆ 8 ಜನರ ಬಂಧನವಾಗಿದೆ. ಸದ್ಯ ಫೋಟೋಗ್ರಾಫರ್ ಉಮೇಶ ಹೊಸೂರು ಬೈಲಹೊಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಫ್ರೀ ಬಸ್ ಸೇರಿದಂತೆ ಇನ್ನೂ ಎರಡು ಗ್ಯಾರಂಟಿ ನಿಲ್ಲಿಸಬೇಕು – ಸಿಎಂಗೆ ಶಾಸಕ ಗವಿಯಪ್ಪ ಆಗ್ರಹ..!