ದೊಡ್ಮನೆ ಕುಡಿ ವಿನಯ್ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಪೆಪೆ’ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಶ್ರೀಲೇಶ್ ನಾಯರ್ ನಿರ್ದೇಶನದ ಈ ಚಿತ್ರ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಖರ್ಚಿನಲ್ಲಿ ಅದ್ಧೂರಿಯಾಗಿ ಮೂಡಿಬಂದಿದೆ.
ಈ ವರೆಗೂ ನಟ ವಿನಯ್ ರಾಜ್‌ಕುಮಾರ್ ಮಾಸ್ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ‘ಪೆಪೆ’ ಚಿತ್ರದಲ್ಲಿ ನಟ ವಿನಯ್ ರಾಜ್‌ಕುಮಾರ್ ಕೈಯಲ್ಲಿ ಕತ್ತಿ ಹಿಡಿದು, ಮೈಗೆ ರಕ್ತ ಅಂಟಿಸಿಕೊಂಡು ಭರ್ಜರಿಯಾಗಿ ತೆರೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು, ವಿನಯ್ ಅವರ ಹೊಸ ಅವತಾರ ಕಂಡು ಮಾರು ಹೋಗಿದ್ದಾರೆ. ವಿನಯ್ ಹೀಗೂ ಕಾಣ್ತಾರಾ? ಈ ರೀತಿಯಲ್ಲಿಯೂ ನಟಿಸ್ತಾರಾ? ಎಂದು ಹುಬ್ಬೇರಿಸಿದ್ದಾರೆ. ಈ ನಡುವೆ ಸಿನಿಮಾ ನೋಡಿದ ಕಿಚ್ಚ ಸುದೀಪ್ ಸಹ ಚಿತ್ರದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಟ್ವಿಟರ್ ಪೇಜ್‌ನಲ್ಲಿಯೇ ಚಿತ್ರದ ಕುರಿತು ಬರೆದುಕೊಂಡಿರುವ ಸುದೀಪ್ ಅವರು, ಪೆಪೆ ಚಿತ್ರ ತುಂಬಾನೆ ಚೆನ್ನಾಗಿದೆ. ಕಥೆ ನಿರೂಪಣೆ ವಿಶೇಷವಾಗಿಯೇ ಇದೆ. ಪ್ರತಿಯೊಬ್ಬ ಆ್ಯಕ್ಟರ್ ದಿ ಬೆಸ್ಟ್ ಕೊಟ್ಟಿದ್ದಾರೆ. ಅದರಲ್ಲೂ ವಿನಯರಾಜ್‌ಕುಮಾರ್ ಪರದೆಯ ಮೇಲೆ ಕಮಾಲ್ ಮಾಡಿದ್ದಾರೆ. ಮಾಸ್ ಪಾತ್ರಕ್ಕೆ ಸರಿಹೊಂದುವಂತೆ ತಮ್ಮನ್ನು ಚೆನ್ನಾಗಿ ರೂಪಿಸಿಕೊಂಡಿದ್ದಾರೆ. ಶುಭಾಶಯಗಳು ಚಾಂಪ್ ಎಂದಿದ್ದಾರೆ.
ಅದ್ಭುತ ಸಂಗೀತ ಮತ್ತು ಸಂಕಲನ, ಒಟ್ಟಾರೆ ಸಿನಿಮಾವನ್ನು ಮೇಲಕ್ಕೆತ್ತಿದೆ. ನಿರ್ದೇಶಕ ಶ್ರೀಲೇಶ್ ನಾಯರ್ ಗಟ್ಟಿ ಕಥೆಯೊಂದಿಗೆ ದಿಟ್ಟತನ ತೋರಿದ್ದಾರೆ. ಚಿತ್ರದ ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ತಂಡಕ್ಕೆ ನನ್ನ ಶುಭಾಶಯಗಳು” ಎಂದು ಸಿನಿಮಾ ನೋಡಿದ ಸುದೀಪ್ ಮೆಚ್ಚುಗೆಯ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಪ್ರಮೋದ್ ಜೋಯಿಸ್ ನಿರ್ದೇಶನದ ‘REDRUM’ ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್..!